ಧಾರವಾಡ: ವಿದ್ಯಾಕಾಶಿ ಖ್ಯಾತಿಯ ಧಾರವಾಡಕ್ಕೂ ಉಡುಪಿಯ ಪೇಜಾವರದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೂ ಅವಿನಾಭಾವ ಸಂಬಂಧ ಇತ್ತು.
ಧಾರವಾಡ ವಿದ್ಯಾಕಾಶಿ ಎಂಬ ಹೆಗ್ಗಳಿಕೆ ಪಡೆಯಲು ಶ್ರೀಗಳ ಕೊಡುಗೆ ಅಪಾರವಾಗಿದೆ. ಪೇಜಾವರ ಶ್ರೀ ಹಾಗೂ ಕಾರ್ಯಾಧ್ಯಕ್ಷರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜನತಾ ಶಿಕ್ಷಣ ಸಮಿತಿ ಈ ಭಾಗದಲ್ಲಿ ಹೆಮ್ಮರವಾಗಿ ಬೆಳೆದಿದೆ. ಹಾಳುಕೊಂಪೆಯಾಗಿದ್ದ ವಿದ್ಯಾಗಿರಿಯ ಗುಡ್ಡದಲ್ಲಿ ವಿದ್ಯೆಯ ಬೀಜ ಬಿತ್ತುವ ಮೂಲಕ ನಿಜಕ್ಕೂ “ವಿದ್ಯಾಗಿರಿ’ಯನ್ನಾಗಿ ಮಾಡಿದ್ದಾರೆ.
ಜೆಎಸ್‌ಎಸ್‌ಗೆ ಮರುಜೀವ: 1944ರಲ್ಲಿ ರಾಮರಾವ್ ಹುಕ್ಕೇರಿಕರ ಅವರಿಂದ ಸ್ಥಾಪನೆಯಾದ ಜನತಾ ಶಿಕ್ಷಣ ಸಮಿತಿ 1963ರ ಸಮಯದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿತ್ತು. ಆಗ ಹುಕ್ಕೇರಿಕರ ಅವರು ಶ್ರೀಗಳಲ್ಲಿ ಈ ಸಮಿತಿ ಮುನ್ನಡೆಸುವಂತೆ ಮನವಿ ಮಾಡಿದ್ದರು. ಆ ಬಳಿಕ ಶ್ರೀಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಈ ಸಮಿತಿ ಮುನ್ನಡೆಸುವಂತೆ ಮನವಿ ಮಾಡಿಕೊಂಡಾಗ ಶ್ರೀಗಳ ಇಚ್ಛೆಯಂತೆ ಸಮಿತಿ ಜವಾಬ್ದಾರಿ ವಹಿಸಿಕೊಂಡರು.
ಆಗ ಸಮಿತಿ ಕಾರ್ಯಾಧ್ಯಕ್ಷ ಸ್ಥಾನವನ್ನು ಡಾ|ಹೆಗ್ಗಡೆ ಅವರು ವಹಿಸಿಕೊಂಡರೆ, ಪೇಜಾವರ ಶ್ರೀಗಳು 1973ರಲ್ಲಿ ಅಕ್ಟೋಬರ್ 18ರಂದು ಅಧ್ಯಕ್ಷರಾದರು. ಆಗ 300 ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಸಮಿತಿ ಅಡಿಯಲ್ಲಿ ಈಗ 22 ಅಂಗ ಶಿಕ್ಷಣ ಸಂಸ್ಥೆಗಳಿದ್ದು, 22,500 ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿಯಿಂದ ಹಿಡಿದು ಪಿಜಿ, ಪಿಎಚ್‌ಡಿವರೆಗೂ ವಿದ್ಯಾರ್ಥಿಗಳಿದ್ದಾರೆ.
ಪ್ರಹ್ಲಾದ ನಿಲಯ ಸ್ಥಾಪನೆ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಮೊದಲ ಸಂಸ್ಥೆ ಧಾರವಾಡದ ಪ್ರಹ್ಲಾದ ವಿದ್ಯಾರ್ಥಿ ನಿಲಯ. 1955ರಲ್ಲಿ ಪ್ರಹ್ಲಾದ ವಿದ್ಯಾರ್ಥಿ ನಿಲಯ ಸ್ಥಾಪಿಸುವ ನಿರ್ಣಯ ಶ್ರೀಗಳು ಕೈಗೊಂಡಾಗ ಅವರಿಗೆ ಕೇವಲ 24 ವರ್ಷವಾಗಿತ್ತು. ಶ್ರೀಗಳ ಸಂಕಲ್ಪದಿಂದ ನಿಲಯ ಸ್ಥಾಪನೆಗೊಂಡು 2018 ರಲ್ಲಿ ವಜ್ರ ಮಹೋತ್ಸವ ಆಚರಿಸಿಕೊಂಡಿದೆ. ಈ ನಿಲಯದಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಳಿದುಕೊಂಡು ವಿದ್ಯೆಯನ್ನು ಪಡೆದಿದ್ದಾರೆ.
ಪ್ರಭಂಜನಾಚಾರ್ಯ ವ್ಯಾಸನಕೆರೆ, ಪಂ| ನಾರಾಯಣಾಚಾರ್ಯ ಧೂಳಖೇಡ ಸೇರಿದಂತೆ ಮೊದಲಾದ ಶ್ರೇಷ್ಠರು ಈ ನಿಲಯದ ವಿದ್ಯಾರ್ಥಿಗಳಾಗಿದ್ದರು ಎಂಬುದು ಹೆಮ್ಮೆಯ ವಿಷಯ. ಈ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಓದಿ ದೇಶ-ವಿದೇಶಗಳಲ್ಲಿ ನೆಲೆಸಿರುವ ಹಿಂದಿನ ವಿದ್ಯಾರ್ಥಿಗಳಲ್ಲಿ ಕೆಲವರು ಕೂಡಿಕೊಂಡು 15 ವರ್ಷದ ಹಿಂದೆ “ನಿಲಯ ಫೌಂಡೇಶನ್’ ಎಂಬ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಶ್ರೀ ಪ್ರಹ್ಲಾದ ವಿದ್ಯಾರ್ಥಿ ನಿಲಯ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷರಾಗಿರುವ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಈಗಲೂ ಈ ನಿಲಯ ಮುನ್ನಡೆದಿದೆ.