ಲಕ್ನೋ: ಭೋಜ್ ಪುರಿ ನಟಿ ಆಕಾಂಕ್ಷಾ ದುಬೆ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ತನಿಖೆ ನಡೆಯುತ್ತಿದೆ. ಈ ನಡುವೆ ತನಿಖೆಯ ಜಾಡಿಗೆ ಒಂದು ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.
ಇತ್ತೀಚೆಗೆ ನಟಿಯ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿತ್ತು. ಆಕೆಯ ಹೊಟ್ಟೆಯಲ್ಲಿ ಆಹಾರ ಇರಲಿಲ್ಲ. ಅವಳು ಮದ್ಯಪಾನ ಮಾಡಿಲ್ಲ ಮತ್ತು ಮದ್ಯದ ಯಾವುದೇ ಅಂಶಗಳು ಹೊಟ್ಟೆಯಲ್ಲಿ ಕಂಡುಬಂದಿಲ್ಲ. ಆದರೆ ಮೃತರ ಹೊಟ್ಟೆಯಲ್ಲಿ ಅಪರಿಚಿತ ಕಂದು ದ್ರವ ಕಂಡುಬಂದಿದೆ. 20ml ನಷ್ಟು ಕಂದು ದ್ರವ ಕಂಡು ಬಂದಿರುವುವುದು ವರದಿಯಲ್ಲಿ ಗೊತ್ತಾಗಿತ್ತು.
ಇದೇ ವರ್ಷದ ಮಾ.26 ರಂದು ಸಿನಿಮಾದ ಶೂಟಿಂಗ್ ಗಾಗಿ ವಾರಣಾಸಿಯ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದ ಆಕಾಂಕ್ಷಾ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂಬಂಧ ಭೋಜ್ ಪುರಿ ಗಾಯಕ ಸಮರ್ ಸಿಂಗ್ ಮತ್ತು ಅವರ ಸಹೋದರ ಸಂಜಯ್ ಸಿಂಗ್ ಇಬ್ಬರನ್ನು ಸೇರಿದಂತೆ ಸಂದೀಪ್ ಸಿಂಗ್ ಮತ್ತು ಅರುಣ್ ಪಾಂಡೆ ಬಂಧಿಸಲಾಗಿತ್ತು.
ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Related Articles
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಸುಳಿವು ಲಭ್ಯವಾಗಿದೆ. ಆತ್ಮಹತ್ಯೆಯ ದಿನ ನಟಿ ಆಕಾಂಕ್ಷಾ ಧರಿಸಿದ್ದ ಉಡುಗೆಯನ್ನು ಪರೀಕ್ಷೆ ಮಾಡಲಾಗಿದ್ದು, ನಟಿಯ ಒಳ ಉಡುಪು ಸೇರಿದಂತೆ ಆಕಾಂಕ್ಷಾಳ ಬಟ್ಟೆಯನ್ನು ಪರೀಕ್ಷೆ ಮಾಡಲಾಗಿದೆ. ಒಳ ಉಡುಪಿನಲ್ಲಿ ವೀರ್ಯ(sperm) ಪತ್ತೆಯಾಗಿದೆ.
ಈ ಕುರಿತಂತೆ ಅಗತ್ಯ ಪರೀಕ್ಷೆಗಳಿಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಲಭ್ಯವಾದ ಸಾಕ್ಷಿಯನ್ನು ಕಳುಹಿಸಲಾಗಿದೆ.
ಆಕಾಂಕ್ಷಾ ಅವರ ನಿಧನದ ನಂತರ, ಆಕೆಯ ಬಟ್ಟೆಗಳು ಮತ್ತು ಖಾಸಗಿ ಅಂಗದ ಸ್ವ್ಯಾಬ್‌ಗಳನ್ನು ರೋಗಶಾಸ್ತ್ರ ಮತ್ತು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿಗಳ ಪ್ರಕಾರ, ಆಕಾಂಕ್ಷಾ ಅವರ ಒಳ ಉಡುಪು ಸೇರಿದಂತೆ ಅವರ ಬಟ್ಟೆಗಳಲ್ಲಿ ವೀರ್ಯ ಪತ್ತೆಯಾಗಿದೆ ಎಂದು ವರುಣಾ ವಲಯದ ಡಿಸಿಪಿ ಅಮಿತ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರೋಪಿಗಳಾದ ಸಮರ್ ಸಿಂಗ್, ಸಂಜಯ್ ಸಿಂಗ್, ಸಂದೀಪ್ ಸಿಂಗ್ ಮತ್ತು ಅರುಣ್ ಪಾಂಡೆ ಅವರ ಮಾದರಿಗಳನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲಿದ್ದು, ಅವುಗಳು ಆಕಾಂಕ್ಷಾ ಅವರ ಬಟ್ಟೆಯಲ್ಲಿ ಕಂಡುಬರುವ ವೀರ್ಯದೊಂದಿಗೆ ಹೊಂದಾಣಿಕೆಯಾಗುತ್ತವೆಯೇ ಇಲ್ವೋ ಎನ್ನುವುದು ಮುಂದೆ ಗೊತ್ತಾಗಲಿದೆ ಎಂದು ವರದಿ ತಿಳಿಸಿದೆ.
ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು “ಸಂಶಯಾಸ್ಪದವಾಗಿ ವರ್ತಿಸುತ್ತಿದ್ದಾರೆ” ಎಂದು ಆಕಾಂಕ್ಷಾ ಪರ ವಕೀಲರು ಇತ್ತೀಚೆಗೆ ಆರೋಪಿಸಿದ್ದಾರೆ.