ಶಾಂಘೈ: ಅಕಾನೆ ಯಮಾಗುಚಿ “ಏಶ್ಯನ್ ಬ್ಯಾಡ್ಮಿಂಟನ್’ ಕೂಟದ ವನಿತಾ ಚಾಂಪಿಯನ್ ಆಗುವ ಮೂಲಕ ಈ ಕೂಟದಲ್ಲಿ ಪ್ರಶಸ್ತಿ ಗೆದ್ದ ಮೊದಲ ಜಪಾನಿನ ಆಟಗಾರ್ತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಕೆಂಟೊ ಮೊಮೊಟ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಜಪಾನ್ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ರವಿವಾರ ನಡೆದ ಫೈನಲ್‌ನಲ್ಲಿ 3ನೇ ಶ್ರೇಯಾಂಕದ ಯಮಾಗುಚಿ ಚೀನದ ಹೀ ಬಿಂಗ್‌ಜಾವೊ ಅವರನ್ನು 21-19, 21-9 ನೇರ ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು. ಮೊದಲ ಗೇಮ್‌ನಲ್ಲಿ 12-2 ಮುನ್ನಡೆಯಲ್ಲಿದ್ದ ಯಮಾಗುಚಿಗೆ ಅನಂತರ ಬಿಂಗ್‌ಜಾವೊ ತೀವ್ರ ಪೈಪೋಟಿಯೊಡ್ಡಿದರು. ದ್ವಿತೀಯ ಗೇಮ್‌ನಲ್ಲಂತೂ ಯಮಾಗುಚಿ ಅವರದು ಭರ್ಜರಿ ಮುನ್ನಡೆ. ಒಂದು ಹಂತದಲ್ಲಿ 11-1 ಅಂಕಗಳ ಓಟ ಬೆಳೆಸಿದ್ದರು. ಕೊನೆಯಲ್ಲಿ 21-9 ಅಂತರದಿಂದ ಗೆದ್ದರು.
ಮೊಮೊಟ ಚಾಂಪಿಯನ್
ಪುರುಷರ ವಿಭಾಗದ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟ ಜಯ ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆ. ಅವರು ಚೀನದ ಶಿ ಯುಖೀ ವಿರುದ್ಧ 12-21, 21-18, 21-9 ಗೇಮ್‌ಗಳ ಜಯ ಸಾಧಿಸಿದರು.