ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ನಿತ್ಯವೂ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಪರಿಗಣಿಸಿ ಜಿಲ್ಲಾಡಳಿತ ಇನ್ನುಮುಂದೆ ಮುಂಗಡವಾಗಿ ಆನ್ ಲೈನ್ ಬುಕ್ಕಿಂಗ್ ಮಾಡಿ ದೇವರ ದರ್ಶನದ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಲು ಪರಿಶೀಲನೆ ನಡೆಸುತ್ತಿದೆ.
ಈಗಾಗಲೇ ತಿರುಪತಿ ತಿರುಮಲ ದೇವಸ್ಥಾನ, ಮಹಾರಾಷ್ಟ್ರದ ಶಿರಡಿ ಸಾಯಿ ದೇಗುಲ ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ಜನದಟ್ಟಣೆ ತಪ್ಪಿಸಲು ಮುಂಚಿತವಾಗಿ ಆನ್ ಲೈನ್ ಮೂಲಕ ದೇವರ ದರ್ಶನದ ದಿನಾಂಕ ಮತ್ತು ಸಮಯವನ್ನು ನಿಗದಿ ಭಕ್ತರಿಗೆ ತಿಳಿಸಲಾಗುತ್ತಿದೆ.
ಭಕ್ತರ ಒತ್ತಾಯದ ಮೇರೆಗೆ ಇದೇ ಪದ್ಧತಿಯನ್ನು ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ದರ್ಶನಕ್ಕೆ ಆಗಮಿಸುವವರನ್ನು ಮುಂಚಿತವಾಗಿ ಆನ್ ಲೈನ್ ಮೂಲಕ ಬುಕಿಂಗ್ ಮಾಡಿ ಅವರು ಬರುವ ದಿನಾಂಕ ಮತ್ತು ಸಮಯವನ್ನು ಆನ್ ಲೈನ್ ನಲ್ಲಿ ತಿಳಿಸಲು ನಿರ್ಧರಿಸಿದೆ. ಕರ್ನಾಟಕದ ಹೆಚ್ಚು ಭಕ್ತರನ್ನು ಹೊಂದಿರುವ ದೇವಸ್ಥಾನಗಳ ಪೈಕಿ ಕಿಷ್ಕಿಂದಾ ಅಂಜನಾದ್ರಿ ಯು ಕಳೆದ ಹತ್ತು ವರ್ಷಗಳಿಂದ ಮುಂಚೂಣಿಯಲ್ಲಿದೆ. ರಾಜ್ಯ ಮತ್ತು ಅಂತರ್ ರಾಜ್ಯಗಳಿಂದ ಇಲ್ಲಿಗೆ ಭಕ್ತರು ಶನಿವಾರ ಮತ್ತು ಮಂಗಳವಾರ ಅಮವಾಸ್ಯೆಯ ದಿನದಂದು ಹೆಚ್ಚು ಸಂಖ್ಯೆಯಲ್ಲಿ ಆಗಮಿಸುತ್ತಾರೆ .
ಇದನ್ನೂ ಓದಿ :ಜೆಸಿಬಿ ದುರಸ್ತಿ ವೇಳೆ ಅವಘಡ : ಚಾಲಕ ಮತ್ತು ಪೌರ ಕಾರ್ಮಿಕ ಸ್ಥಳದಲ್ಲೇ ಸಾವು
ಪ್ರಸ್ತುತ ಕರೋನಾ ಮೂರನೇ ಅಲೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶನಿವಾರ ಮತ್ತು ರವಿವಾರ ಹಾಗೂ ಅಮಾವಾಸ್ಯೆ ದಿನದಂದು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ದೇವರ ದರ್ಶನಕ್ಕೆ ಸಾಮಾಜಿಕ ಅಂತರ ಮತ್ತು ಸರ್ಕಾರದ ನಿಯಮಾವಳಿಗಳನ್ನನುಸರಿಸಿ ಅವಕಾಶ ಕಲ್ಪಿಸಿದೆ.ಆದರೂ ಜನದಟ್ಟಣೆ ಹೆಚ್ಚಾಗುತ್ತಿದೆ ಇದನ್ನು ಪರಿಗಣಿಸಿ ಬೇರೆ ದೇವಾಲಯಗಳಲ್ಲಿ ಮಾಡಿದಂತೆ ಇಲ್ಲಿಯೂ ಸಹ ಇಲ್ಲಿಗೆ ಆಗಮಿಸುವ ಭಕ್ತರನ್ನು ಮುಂಚಿತವಾಗಿ ಆನ್ ಲೈನ್ ನಲ್ಲಿ ಬುಕಿಂಗ್ ಮಾಡಿ ಅವರು ಬರುವ ದಿನಾಂಕ ಮತ್ತು ಸಮಯವನ್ನು ನಿಗದಿಕೊಳಿಸಲು ಯೋಜಿಸಲಾಗುತ್ತಿದೆ.ಇದರಿಂದ ಬೇರೆ ಊರುಗಳಿಂದ ಬರುವ ಭಕ್ತರಿಗೆ ಅನುಕೂಲವಾಗಲಿದೆ ಸ್ಥಳೀಯವಾಗಿ ಬೆಟ್ಟಕ್ಕೆ ಬರುವ ಭಕ್ತರಿಗೆ ಆಫ್ ಲೈನ್ ಮೂಲಕವೂ ಸಹ ದೇವರ ದರ್ಶನಕ್ಕೆ ಮೊದಲಿನಂತೆ ಅವಕಾಶ ಕಲ್ಪಿಸಲಾಗುತ್ತದೆ. ಅಂಜನಾದ್ರಿಯ ದರ್ಶನಕ್ಕೆ ಮುಂಚಿತವಾಗಿ ಆನ್ ಲೈನ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಯಿಂದಾಗಿ ಅಂಜನಾದ್ರಿ ಬೆಟ್ಟದ ಮತ್ತು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.ನಿಗದಿತ ದಿನಾಂಕ ಮತ್ತು ಸಮಯಕ್ಕೆ ದೇವರ ದರ್ಶನ ಆಗುವುದರಿಂದ ಸ್ಥಳೀಯವಾಗಿ ಹೋಟೇಲ್ ರೆಸಾರ್ಟ್ಗಳಲ್ಲಿ ಭಕ್ತರು ತಂಗಿ ದೇವರ ದರ್ಶನಕ್ಕೆ ತೆರಳುವುದರಿಂದ ಇಲ್ಲಿಯ ವ್ಯಾಪಾರ ವಹಿವಾಟು ಹೆಚ್ಚಾಗಿ ಸ್ಥಳೀಯರಲ್ಲಿ ಆರ್ಥಿಕ ಸದೃಢತೆ ಬರುತ್ತದೆ ಎನ್ನುವುದು ಸ್ಥಳೀಯರ ಆಶಯವಾಗಿದೆ.
ಪರಿಶೀಲನೆ : ಜನದಟ್ಟಣೆ ಕಡಿಮೆ ಮಾಡಲು ಈಗಾಗಲೇ ಜಿಲ್ಲಾಡಳಿತ ಶನಿವಾರ ರವಿವಾರ ಮತ್ತು ಅಮಾವಾಸ್ಯೆಯಂದು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಅಂಜನಾದ್ರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರೋನ ಮೂರನೇ ಅಲೆ ತಪ್ಪಿಸಲು ಹೆಚ್ಚು ಜನರು ಸೇರದಂತೆ ವ್ಯವಸ್ಥೆ ಮಾಡಲಾಗಿದೆ ಸಾಮಾಜಿಕ ಅಂತರ ಕಡ್ಡಾಯ ಮಾಸ್ಕ್ ಧರಿಸುವಂತೆ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಅನ್ಯ ದೇಗುಲಗಳಲ್ಲಿ ಮುಂಚಿತವಾಗಿ ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಇಲ್ಲಿಯೂ ಅಳವಡಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.