ಜೈಪುರ: ಅಜ್ಮೇರ್ನಲ್ಲಿ 2007ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಸಹಿತ 7 ಮಂದಿಯನ್ನು ಖುಲಾಸೆಗೊಳಿಸಿ ಜೈಪುರ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಇದೇ ವೇಳೆ, ಮೂವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಲಾಗಿದೆ.
ಸ್ವಾಮಿ ಅಸೀಮಾನಂದ ಮತ್ತು ಇತರ 6 ಮಂದಿ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಕೇವಲ ಸಂಶಯವಷ್ಟೇ ಇದ್ದು, ಅದು ಸಾಬೀತಾಗದ ಕಾರಣ ಅವರನ್ನು ನಿರ್ದೋಷಿ ಗಳೆಂದು ಪರಿಗಣಿಸುವುದಾಗಿ ನ್ಯಾಯಾಧೀಶ ದಿನೇಶ್ ಗುಪ್ತಾ ಹೇಳಿದ್ದಾರೆ.
ದೇವೇಂದ್ರ ಗುಪ್ತಾ, ಭವೇಶ್ ಪಟೇಲ್ ಮತ್ತು ಸುನೀಲ್ ಜೋಷಿ ಅಪರಾಧಿಗಳು ಎಂದು ಕೋರ್ಟ್ ತೀರ್ಪಿತ್ತಿದೆ. ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ ಸಹಿತ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳನ್ವಯ ಈ ಮೂವರನ್ನು ಅಪರಾಧಿಗಳೆಂದು ಪರಿಗಣಿಸಲಾಗಿದೆ. ಮಾ.16ರಂದು ಇವರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಿಗದಿಪಡಿಸಲಿದೆ. ಗುಪ್ತಾ ಮತ್ತು ಪಟೇಲ್‌ಗೆ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಮೂವರು ಅಪರಾಧಿಗಳ ಪೈಕಿ ಸುನೀಲ್ ಜೋಷಿ 2007ರ ಡಿಸೆಂಬರ್‌ನಲ್ಲಿ ಹತ್ಯೆಗೀಡಾಗಿದ್ದ.
ಏನಿದು ಪ್ರಕರಣ?: ರಾಜಸ್ಥಾನದ ಅಜೆ¾àರ್‌ನಲ್ಲಿರುವ ಪ್ರಸಿದ್ಧ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ 2007ರ ಅಕ್ಟೋಬರ್ 11ರಂದು ಸ್ಫೋಟ ಸಂಭವಿಸಿತ್ತು. ರಂಜಾನ್ ಮಾಸದ ಹಿನ್ನೆಲೆಯಲ್ಲಿ ಇಫ್ತಾರ್‌ಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ನೆರೆದಿದ್ದಂಥ ಸಮಯದಲ್ಲೇ ಅಂದರೆ ಸುಮಾರು 6.30ರ ವೇಳೆಗೆ ಈ ದಾಳಿ ನಡೆದಿತ್ತು. ಪರಿಣಾಮ ಮೂವರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದರು. ಮೊದಲಿಗೆ ಪ್ರಕರಣವನ್ನು ರಾಜಸ್ಥಾನ ಎಟಿಎಸ್(ಉಗ್ರ ನಿಗ್ರಹ ದಳ)ಗೆ, ನಂತರ ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ವರ್ಗಾಯಿಸಲಾಯಿತು. ಈ ಕೇಸಿನಲ್ಲಿ ಒಟ್ಟು 149 ಸಾಕ್ಷ್ಯಗಳು ಮತ್ತು 451 ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು. ಪ್ರಕರಣ ಸಂಬಂಧ ಎನ್‌ಐಎ ಈವರೆಗೆ ಒಟ್ಟು ಮೂರು ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿದೆ.