Advertisement

ಸಿದ್ಧರಾಮ ಜಯಂತಿ ಯಶಸ್ಸಿಗೆ ಸಹಕರಿಸಿ

12:31 PM Jun 17, 2019 | Naveen |

ಅಜ್ಜಂಪುರ: ಅಜ್ಜಂಪುರ ಸಮೀಪದ ಸೊಲ್ಲಾಪುರ ಗ್ರಾಮದಲ್ಲಿ ಜನವರಿ 14 ಮತ್ತು 15, 2020ರಂದು ನಡೆಯಲಿರುವ 847ನೇ ಸಿದ್ಧರಾಮ ಜಯಂತಿ ಯಶಸ್ವಿಗೆ ಭಕ್ತರೆಲ್ಲರೂ ಸರ್ವರೀತಿಯ ಸಹಕಾರ ನೀಡಬೇಕು ಎಂದು ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶೀಕೇಂದ್ರ ಸ್ವಾಮೀಜಿ ಮನವಿ ಮಾಡಿದರು.

Advertisement

ಅಜ್ಜಂಪುರ ಸಮೀಪದ ಸೊಲ್ಲಾಪುರದ ಗುರುಸಿದ್ಧರಾಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರವಿವಾರ ನಡೆದ ಸಿದ್ಧರಾಮ ಜಯಂತಿ ಆಚರಣೆ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನೊಳಂಭ ಸಮಾಜ ಜಯಂತಿ ಸಾರಥ್ಯ ವಹಿಸಿದ್ದರೂ, ಸರ್ವ ಭಕ್ತರ ಸಲಹೆ-ಸೂಚನೆ-ಮಾರ್ಗದರ್ಶನ-ಸಹಕಾರ-ಸೇವೆಯನ್ನು ಪರಿಗಣಿಸುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಲಕ್ಷಾಂತರ ಭಕ್ತ ಸಮೂಹಕ್ಕೆ ಆಹಾರ, ವಸತಿ ಕೊರತೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಸರ್ವರೂ ಕೈಜೋಡಿಸಬೇಕು ಎಂದು ನೊಳಂಭ ವೀರಶೈವ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್‌.ಎಂ. ನಾಗರಾಜ್‌ ಕರೆ ನೀಡಿದರು.

ಸಿದ್ಧರಾಮೇಶ್ವರ ಜಯಂತ್ಯುತ್ಸವ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನಡೆಯಬೇಕು. ಈ ಆಚರಣೆ ಸ್ಮರಣೆಗಾಗಿ ಸೊಲ್ಲಾಪುರದಲ್ಲಿ ಯಾತ್ರಿ ನಿವಾಸ ಅಥವಾ ಸಮುದಾಯ ಭವನ ನಿರ್ಮಾಣ ಇಲ್ಲವೇ ಹೊಸ ಶಿಕ್ಷಣ ಸಂಸ್ಥೆ ತೆರೆಯುವ, ಶ್ರೀ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು ಎಂದು ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್‌ ಸಲಹೆ ನೀಡಿದರು.

ಚಿಕ್ಕಾನವಂಗಲ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ, ಸಿದ್ಧರಾಮೇಶ್ವರರ ಜಯಂತ್ಯುತ್ಸವ ಆಚರಣೆಯಲ್ಲಿ ಸರ್ವರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಮೂಲಕ ನೊಳಂಭ ವೀರಶೈವ ಸಮಾಜ ಜಾತಿವಾದಿಯಲ್ಲ ಎಂಬ ಸಂದೇಶ ನೀಡಬೇಕಿದೆ ಎಂದರು.

Advertisement

ಸಿದ್ಧರಾಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ, ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪ್ರತೀ ತಿಂಗಳೂ ಸಭೆ ನಡೆಸಬೇಕು. ಆಗಬೇಕಾದ ಕಾರ್ಯಗಳು, ಪೂರ್ಣಗೊಂಡ ಕೆಲಸಗಳ ಪರಿಶೀಲನೆ ಮಾಡಬೇಕು. ಕುಂದುಕೊರತೆಯಿಲ್ಲದೇ ಕ್ರಮಬದ್ಧ ಮತ್ತು ಶಿಸ್ತು ಬದ್ಧವಾಗಿ ಜಯಂತಿ ಆಚರಣೆಗೆ ಅಗತ್ಯ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಕಷ್ಟು ಭಕ್ತರು ಪಾಲ್ಗೊಳ್ಳುವ ಕಾರ್ಯಕ್ರಮ ನಡೆಸುವಾಗ ಸಣ್ಣಪುಟ್ಟ ಗೊಂದಲ ಸಾಮಾನ್ಯ. ದೋಷ ಕಂಡು ಬಂದಾಗ ಸಮಿತಿ ಗಮನಕ್ಕೆ ತಂದು ಪರಿಹರಿಸಲು ಸಹಕರಿಸಿ ಎಂದು ಎಪಿಎಂಸಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ತಿಳಿಸಿದರು.

ದೇವಾಲಯ ಸಮಿತಿ ಉಪಾಧ್ಯಕ್ಷ ಸಿ.ಕೆ. ಸ್ವಾಮಿ, ಮುಖಂಡ ಎ.ಸಿ. ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌. ತಿಪ್ಪೇರುದ್ರಯ್ಯ, ಮುಖಂಡ ಎನ್‌. ರಾಜು, ದೃವಕುಮಾರ್‌, ಹೊಸದುರ್ಗ ಜಿಲ್ಲಾ ಪಂಚಾಯಿತಿ ಸದಸ್ಯ ಹನುಮಂತಪ್ಪ, ಮಾಜಿ ಸದಸ್ಯೆ ಸರೋಜಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್‌. ರವಿ, ಮುಖಂಡ, ಗೋಪಿಕೃಷ್ಣ, ಹೊನ್ನಾಳಿಯ ರುದ್ರೇಗೌಡ ಮಾತ‌ನಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಏಕೋರಾಮಸ್ವಾಮಿ, ಗುಬ್ಬಿಯ ತೋಂಟದಾರ್ಯ, ತುಮಕೂರಿನ ಮೋಹನ್‌ಕುಮಾರ್‌, ಅರಸೀಕೆರೆ ರವಿ, ಬೆಟ್ಟದಹಳ್ಳಿರವಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್‌ ಮತ್ತಿತರರು ಪಾಲ್ಗೂಂಡಿದ್ದರು.

ಜಯಂತ್ಯುತ್ಸವಕ್ಕೆ ದೇಣಿಗೆ: ಸಮಾಜ ಸೇವಕ ಎಚ್.ಎಂ. ಗೋಪಿಕೃಷ್ಣ 15 ಲಕ್ಷ ರೂ., ವಕೀಲ ರವಿಶಾನುಬಾಗ್‌, ವಕೀಲ ಮಲ್ಲೇಗೌಡ ತಲಾ 1 ಲಕ್ಷ ರೂ., ರವಿಕುಮಾರ್‌ 2 ಲಕ್ಷ ರೂ., ಕಲ್ಕೆರೆ ಸರೋಜಮ್ಮ, ಹೊನ್ನಾಳಿ ರುದ್ರೇಗೌಡ ತಲಾ 50 ಸಾವಿರ ರೂ. ನೀಡುವ ಭರವಸೆ ನೀಡಿದರು. ತುಮಕೂರಿನ ಮೋಹನ್‌ಕುಮಾರ್‌ 10 ಲಕ್ಷ ರೂ., ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ 10 ಲಕ್ಷ ರೂ., ಎಪಿಎಂಸಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ 5 ಲಕ್ಷ ರೂ ಹಣವನ್ನು ಭಕ್ತರಿಂದ ಸಂಗ್ರಹಿಸಿ ನೀಡುವ ಆಶ್ವಾಸನೆ ನೀಡಿದರು. ಎಂ. ಹೊಸಹಳ್ಳಿಯ ಎಸ್‌. ಕುಮಾರಪ್ಪ 100 ಪಾಕಿಟ್ ಅಕ್ಕಿ ಕೊಡುವುದಾಗಿ ತಿಳಿಸಿದರು.

ಸ್ವಾಗತಿ ಸಮಿತಿ ರಚನೆ: ಇದೇ ವೇಳೆ ಸ್ವಾಗತ ಸಮಿತಿ ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ದೇವಾಲಯ ಸಮಿತಿ ಅಧ್ಯಕ್ಷ ರಾಜಣ್ಣ (ಗ್ಯಾಸ್‌), ಕಾರ್ಯದರ್ಶಿಯಾಗಿ ಸಿ.ಕೆ.ಸ್ವಾಮಿ, ಖಜಾಂಚಿಯಾಗಿ ಎಪಿಎಂಸಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next