Advertisement

ಭದ್ರೆಯಿಂದ ಜಲಕ್ಷಾಮ ದೂರ: ಶಿಮುಶ

04:00 PM Oct 21, 2019 | |

ಅಜ್ಜಂಪುರ: ಪ್ರಾಯೋಗಿಕವಾಗಿ ಭದ್ರೆಯ ನೀರು ವಾಣಿವಿಲಾಸ ಸಾಗರಕ್ಕೆ ಹರಿದು ಬಂದಿದೆ. ಇದು ಭವಿಷ್ಯದಲ್ಲಿ ಜಿಲ್ಲೆಯ ಜಲಕ್ಷಾಮ ನಿವಾರಿಸುವ ಆಶಾವಾದ ಮೂಡಿಸಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ಹೇಳಿದರು.

Advertisement

ಅಜ್ಜಂಪುರ ಸಮೀಪ ಬೆಟ್ಟದಾವರೆ ಕೆರೆಯಲ್ಲಿ ಭಾನುವಾರ ಭದ್ರಾ ಮೇಲ್ದಂಡೆ ಯೋಜನೆಯ ನೀರೆತ್ತುವ ಪಂಪಿಂಗ್‌ ಮೋಟಾರು ಇರಿಸಿದ ಸ್ಥಳದಲ್ಲಿ “ಜಲವೀಲ್ಯೆ ‘ ನೀಡಿ ಮಾತನಾಡಿದ ಅವರು, ಭದ್ರೆಯ ನೀರು ಜಿಲ್ಲೆಗೆ ಹರಿಯುತ್ತಿರುವುದು ಸಂತಸ ತರಿಸಿದ್ದರೂ, ತುಂಗೆಯ ನೀರು ಜಿಲ್ಲೆಗೆ ಹರಿಯದಿರುವುದು ಅಷ್ಟೇ ಪ್ರಮಾಣದ ಬೇಸರ ಮೂಡಿಸಿದೆ. ತುಂಗಾ-ಭದ್ರೆ ಎರಡೂ ಜಿಲ್ಲೆಗೆ ಹರಿದಾಗ ಮಾತ್ರ ಜಲಕ್ಷಾಮ ನಿವಾರಣೆ ಆಗಲಿದೆ. ಜಿಲ್ಲೆಯ ಕೆರೆ-ಕಟ್ಟೆ-ಜಲಾಶಗಳು ತುಂಬಲಿವೆ. ಜಲ ಸಂವೃದ್ಧಿಗೊಳ್ಳಲಿದೆ ಎಂದರು.

ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೀರು ಜೀವಜಲ. ಅದು ಒಬ್ಬರ ಸ್ವತ್ತಲ್ಲ. ಅದರ ಮೇಲೆ ಜಗತ್ತಿನ ಎಲ್ಲ ಜೀವಸಂಕುಲಕ್ಕೂ ಹಕ್ಕಿದೆ. ಆ ಹಕ್ಕನ್ನು ಅನುಭವಿಸುವ ಮೊದಲು, ನೀರನ್ನು ವ್ಯರ್ಥವಾಗಿ ಬಳಸುವುದನ್ನು ತಡೆಯುವ ಕರ್ತವ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಇದ್ದ ನೀರನ್ನು ಮಿತವಾಗಿ ಬಳಸುವುದನ್ನು ಮೊದಲು ಕಲಿಯಬೇಕು ಎಂದು ಸಲಹೆ ನೀಡಿದರು.

ನೀರಾವರಿ ಹೋರಾಟ ಸಮಿತಿ ಪ್ರಧಾನ ಸಂಚಲಕ ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ಎಲ್ಲ ಮುಖ್ಯಮಂತ್ರಿಗಳೂ ಯೋಜನೆ ಪೂರ್ಣಕ್ಕೆ ತ್ವರಿತಗತಿಯಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಅಧಿಕಾರಿಗಳೂ ಸಮನ್ವಯತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಅದರಿಂದಲೇ ಮಹತ್ವಾಕಾಂಕ್ಷಿ ಯೋಜನೆ ಸಾಫಲ್ಯತೆಯತ್ತ ಸಾಗಿತು ಎಂದರು. ವಿಶ್ವೇಶ್ವರಯ್ಯ ಜಲ ನಿಗಮದ ತಾಂತ್ರಿಕ ಸಲಹೆಗಾರ ಚೆಲ್ವರಾಜ್‌, ಭದ್ರೆಯಿಂದ ಅಜ್ಜಂಪುರದವರೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಪ್ರತಿದಿನ 500-600 ಕ್ಯೂಸೆಕ್‌ ನೀರು ವಾಣಿವಿಲಾಸ ಸಾಗರ ತಲುಪುತ್ತಿದೆ. ನೀರು ಹರಿಸುವಿಕೆಗೆ ಅಕ್ಟೋಬರ್‌ವರೆಗೆ ಮಾತ್ರ ಅವಕಾಶವಿದೆ. ಆದರೆ ವಿಶೇಷ ಪ್ರಕರಣ ಆಗಿರುವುದರಿಂದ ಬರುವ
ಮಾರ್ಚ್‌ವರೆಗೂ ನೀರು ಹರಿಸಲಾಗುವುದು. ಹಾಗೆ ಮಾಡಿದರೆ ವಾಣಿವಿಲಾಸ ಸಾಗರದಲ್ಲಿ 5 ರಿಂದ 6 ಟಿಎಂಸಿ ಅಡಿ ನೀರು ಸಂಗ್ರಹಗೊಳ್ಳಲಿದೆ ಎಂದು ತಿಳಿಸಿದರು.

ಹೊಸದುರ್ಗ ಕನಕ ಪೀಠದ ಪುರುಷೋತ್ತಮನಾಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಂಸ್ಥಾನದ ಶಾಂತವೀರಸ್ವಾಮೀಜಿ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಎಇಇ ರವಿಕುಮಾರ್‌, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ರೈತ ಸಂಘದ ಕಾರ್ಯದರ್ಶಿ ಎಂ.ಶಂಕರಪ್ಪ, ಮುಖಂಡ ಎ.ಸಿ. ಚಂದ್ರಪ್ಪ ಮತ್ತಿತರರಿದ್ದರು. ಸ್ಥಳ ವೀಕ್ಷಿಸಲು ಚಿತ್ರದುರ್ಗ ಜಿಲ್ಲೆಯ ನೂರಾರು ರೈತರು, ರೈತ ಮಹಿಳೆಯರು, ರಾಜಕೀಯ ಮುಖಂಡರು ಹಾಜರಿದ್ದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next