Advertisement

ಅಜ್ಜರಕಾಡು: ಚರಂಡಿಗಳ ತೆರವು ನಿರ್ಲಕ್ಷ್ಯ, ರಸ್ತೆಯಲ್ಲೇ ನೀರು

02:30 AM May 22, 2018 | |

ಉಡುಪಿ: ಅಜ್ಜರಕಾಡು ವಾರ್ಡ್‌ನ ಹಲವೆಡೆ ಮಳೆನೀರು ಹರಿಯುವ ಚರಂಡಿಗಳನ್ನು ತೆರವುಗೊಳಿಸುವ ಕಾಮಗಾರಿ ನಡೆದಿಲ್ಲ. ಮರಳು, ಕಸ, ಮಣ್ಣು ತುಂಬಿ ಹೋಗಿ ರಸ್ತೆ ಮತ್ತು ಚರಂಡಿ ಸಮನಾಂತರವಾಗಿ ಕಾಣುತ್ತಿದೆ. 

Advertisement

ಈಗ ಆಗಾಗ್ಗೆ ಸುರಿಯುತ್ತಿರುವ ಸಣ್ಣ ಮಳೆಗೇ ಕೆಲವು ಚರಂಡಿಗಳು ತುಂಬಿ ತುಳುಕುತ್ತಿವೆ. ಚರಂಡಿಯೇ ಇಲ್ಲದ ಪ್ರದೇಶಗಳು ಹಲವು ಇವೆ. ಚರಂಡಿ ಇದ್ದೂ ಇಲ್ಲದಂತಹ ಪ್ರದೇಶಗಳು ಕೂಡ ಇವೆ.

ಒಳಚರಂಡಿ ಕಾಮಗಾರಿ ಅಸಮರ್ಪಕ
ಅಜ್ಜರಕಾಡು ಮುಖ್ಯರಸ್ತೆಯ ಜಿಲ್ಲಾಸ್ಪತ್ರೆಯ ಎದುರು ಭಾಗದಿಂದ ಹರ್ಷ ಮಳಿಗೆಗೆ ಸಂಪರ್ಕಿಸುವ ರಸ್ತೆಯ ಆರಂಭದಲ್ಲೇ ಮಳೆನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ಪ್ರವಹಿಸುತ್ತದೆ. ಇಲ್ಲಿ ಒಳಚರಂಡಿ ಕಾಮಗಾರಿ ಕೂಡ ಅಸಮರ್ಪಕವಾಗಿದ್ದು ಕೊಳಚೆ ನೀರು ಕೂಡ ಮಳೆನೀರಿನ ಜತೆಗೆ ಸೇರಿ ಹೋಗುತ್ತದೆ. 


ನೀರು ಹರಿಯಲು ಸೂಕ್ತ ವ್ಯವಸ್ಥೆ ಅಗತ್ಯ
ಕಾಡಬೆಟ್ಟು ಅಂಬೇಡ್ಕರ್‌ ಕಾಲನಿಯ ಲ್ಲಿಯೂ ಚರಂಡಿ ಇಲ್ಲದೆ ಸಮಸ್ಯೆಯಾಗಿದೆ. ಅಂಬೇಡ್ಕರ್‌ ರಸ್ತೆಯ (ಟಿ.ಎ.ಪೈ ಮೋಡರ್ನ್ ಹಿರಿಯ ಪ್ರಾಥಮಿಕ ಶಾಲೆ)ಲ್ಲಿ ಕೂಡ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲ. ಇತ್ತ ಎಲ್‌ಐಸಿ-ಅಜ್ಜರಕಾಡು ರಸ್ತೆ, ಕೋಟ್‌ ಹಿಂಭಾಗದ ರಸ್ತೆಯ ಅಲ್ಲಲ್ಲಿ ಚರಂಡಿ ಸಮಸ್ಯೆ ಇದೆ. ಮಳೆ ನೀರು ಚರಂಡಿಯನ್ನು ಬಿಟ್ಟು ರಸ್ತೆಯಲ್ಲಿ, ಕಂಪೌಂಡ್‌ ಒಳಗಡೆ ಹರಿಯುವ ಸ್ಥಿತಿ ಇದೆ.

ಸೋಗೆ, ಮರದ ಗೆಲ್ಲು ತಡೆ
ಪ್ಲಾಸ್ಟಿಕ್‌, ಬಾಟಲಿ ಮೊದಲಾದ ತ್ಯಾಜ್ಯಗಳು ಮತ್ತು ಮಣ್ಣು ಚರಂಡಿಯನ್ನು ಮುಚ್ಚುವಂತೆ ಮಾಡಿವೆ. ಇದರ ಜತೆಗೆ ಸೋಗೆ ಮತ್ತು ಮರದ ಗೆಲ್ಲುಗಳನ್ನು ಕೂಡ ಚರಂಡಿಗೆ ಹಾಕಲಾಗಿರುವುದರಿಂದ ಮಳೆನೀರು ಹೋಗಲು ಜಾಗವಿಲ್ಲದಂತಾಗಿದೆ. ಹಲವೆಡೆ ಚರಂಡಿಗಳು ಮಾಯವಾಗಿವೆ. ಸೋಗೆಗಳನ್ನು ವಿಲೇವಾರಿ ಮಾಡಲು ನಗರಸಭೆಯವರು ಕ್ರಮ ಕೈಗೊಂಡಿಲ್ಲ ಎಂಬ ದೂರು ಸ್ಥಳೀಯ ನಿವಾಸಿಗಳದ್ದು. ಸೋಗೆಯನ್ನು ಕಟ್ಟಿಗೆಯಾಗಿ ಬಳಕೆ ಮಾಡುವವರು ನಗರದಲ್ಲಿ ಕಡಿಮೆ. ಹಾಗಾಗಿ ಸೋಗೆ ವಿಲೇವಾರಿ ಕೂಡ ಸವಾಲಾಗಿದೆ. ಮೆಸ್ಕಾಂ ಸಿಬಂದಿ ಕಡಿದು ಹಾಕಿರುವ ಮರದ ಕೊಂಬೆಗಳು ಕೂಡ ಮಳೆನೀರು ಹರಿಯುವ ಚರಂಡಿ ಸೇರಿವೆ. ಇವು ಕೂಡ ಚರಂಡಿ ಬ್ಲಾಕ್‌ ಆಗಲು ಕಾರಣವಾಗಿವೆ.

ಚರಂಡಿಯೇ ಬೇಡವಾಗಿದೆ
ನಗರಸಭೆಯವರಿಗೆ ಚರಂಡಿಯೇ ಬೇಡವಾಗಿದೆ. ಮಳೆಗಾಲದಲ್ಲಿ ಚರಂಡಿಯ ತ್ಯಾಜ್ಯ, ಕಶ್ಮಲಗಳೆಲ್ಲಾ ರಸ್ತೆ, ಮನೆಯ ಕಂಪೌಂಡ್‌ನೊಳಗೆ ಬಂದು ಸೇರುತ್ತವೆ. ಚರಂಡಿಗಳ ನಿರ್ವಹಣೆಯನ್ನು ವರ್ಷಕ್ಕೊಮ್ಮೆ ಮಾಡಿದರೆ ಇಂತಹ ತೊಂದರೆಯಾಗದು. ಜನರು ಕೂಡ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಚರಂಡಿಗೆ ಬಿಸಾಡುವ ಕೆಟ್ಟ ಅಭ್ಯಾಸವನ್ನು ಬಿಡಬೇಕು. 
– ವಿಶ್ವನಾಥ್‌,ಸ್ಥಳೀಯ ನಿವಾಸಿ ಅಜ್ಜರಕಾಡು 

Advertisement

ನಗರಸಭೆಯ ಬೆನ್ನು ಹಿಡಿಯುವೆ
ಅಜ್ಜರಕಾಡು ವಾರ್ಡ್‌ನ ಅಂಬೇಡ್ಕಲ್‌ ಕಾಲನಿ ಸೇರಿದಂತೆ ಹಲವೆಡೆ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದೆ. ಚರಂಡಿಯ ಹೂಳು, ಕಸವನ್ನು ತೆಗೆದು ಸ್ವತ್ಛಗೊಳಿಸಿಲ್ಲ. ಈಗ ಚುನಾವಣೆ ನೀತಿಸಂಹಿತೆ ಇದೆ. ಆದರೂ ನಾನು ತುರ್ತು ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದೇನೆ. ಮಳೆಗಾಲ ಪೂರ್ಣಪ್ರಮಾಣದಲ್ಲಿ ಆರಂಭವಾಗುವ ಮೊದಲು ಕಾಮಗಾರಿ ಮುಗಿಸುವಂತೆ ಒತ್ತಡ ಹಾಕುತ್ತೇನೆ.
– ಯಶ್‌ಪಾಲ್‌ ಸುವರ್ಣ
ನಗರಸಭಾ ಸದಸ್ಯರು, ಅಜ್ಜರಕಾಡು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next