ಅಜ್ಜಂಪುರ: ತಾಲೂಕಿನ ಅನುವನಹಳ್ಳಿ ಗ್ರಾಮದ ಗುರು ಕರಿಬಸವೇಶ್ವರ ಸ್ವಾಮಿ ದೇವಾಲಯ, ಗುರು ಕರಿಬಸವೇಶ್ವರ ಸ್ವಾಮಿಯ “ಮುಳ್ಳುಗದ್ದುಗೆ ಪವಾಡ’ ಮತ್ತು 2ನೇ ವರ್ಷದ ರಥೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ.
ಫೆ.19ರಂದು ಸಂಜೆ ಧಾರ್ಮಿಕ ಭಾವೈಕ್ಯತಾ ಸಮಾರಂಭ ಜರುಗಲಿದ್ದು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಕಿಯ ರಾಚಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಣ್ಣೆ ಮಠದ ಅಭಿನವ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ಬಳಿಕ ಶ್ರೀಸ್ವಾಮಿಗೆ ರುದ್ರಾಭಿಷೇಕ ನಡೆಯಲಿದೆ. ರಾತ್ರಿ 9.30ಕ್ಕೆ ಮುಳ್ಳುಗದ್ದಿಗೆ ಪವಾಡ ಜರುಗಲಿದೆ. 20ಕ್ಕೆ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ. ಶ್ರೀಸ್ವಾಮಿಗೆ ಮಹಾಮಸ್ತಾಕಾಭಿಷೇಕ, ರಥೋತ್ಸವದ ಕಳಸಾರೋಹಣ, ರಥೋತ್ಸವ, ರಾತ್ರಿ ಶ್ರೀಸ್ವಾಮಿಗೆ ಹೂವಿನ ಅಲಂಕಾರ, ಭಜನಾ ಕಾರ್ಯಕ್ರಮ ಜರುಗಲಿದೆ.
ಗುರು ಕರಿಬಸವೇಶ್ವರ ಸ್ವಾಮಿ ಅವಗಾಹನೆ ಆಗುತ್ತಿತ್ತು. ಈ ವೇಳೆ ಬೇಡಿದ ಭಕ್ತರ ಇಷ್ಟಾರ್ಥಗಳು ಸಿದ್ಧಿಯಾದವು. ಹೀಗೆ ಅನುಗ್ರಹ ಪಡೆದ ಟಿ.ಟಿ. ಗೋವಿಂದಪ್ಪ, ಮರವಂಜಿ ಈಶ್ವರಪ್ಪ ದೇವಾಲಯ ನಿರ್ಮಾಣಕ್ಕೆ ನಿವೇಶನ ಒದಗಿಸಿದರು. ಕಡೂರಿನ ಕಾಂತಿಲಾಲ್,
ಕಟ್ಟಡಕ್ಕೆ ಅಗತ್ಯ ಕಬ್ಬಿಣ ನೀಡಿದರು. ದೇವರ ಕಾರುಣ್ಯ ಲಭಿಸಿದೆ ಎನ್ನುವ ಅನೇಕರು ಸಹಕಾರ ನೀಡಿದರು. ಹೀಗೆ 27 ವರ್ಷಗಳ ಹಿಂದೆ ಗುರು ಕರಿಬಸವೇಶ್ವರ ದೇವಾಲಯ ನಿರ್ಮಿಸಿದರು ಎಂದು ಅರ್ಚಕ ಪುಟ್ಟಸ್ವಾಮಿ ತಿಳಿಸುತ್ತಾರೆ.
ದೇವರಿಗೆ ನಡೆದುಕೊಂಡ ಮೇಲೆ ವ್ಯವಹಾರಿಕವಾಗಿ ಲಾಭ ಆಯಿತು ಎಂಬ ಕಾರಣಕ್ಕೆ ಬಂಗನಕಟ್ಟೆಯ ದಿಲೀಪ್, ದೇವಾಲಯಕ್ಕೆ ಶ್ರೀಸ್ವಾಮಿಯ ಬೆಳ್ಳಿ ಮೂರ್ತಿಯನ್ನೂ ನೀಡಿದ್ದಾರೆ. ನಮ್ಮ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡಿ, ನೆಮ್ಮದಿಯುತ ಜೀವನಕ್ಕೆ ಕರಿಸಬವೇಶ್ವರ ಸ್ವಾಮಿ ಅನುಗ್ರಹಿಸಿದ್ದಾನೆ ಎಂಬ ಹಿನ್ನೆಲೆಯಲ್ಲಿ ದಾಬಸ್ ಪೇಟೆಯ ಜ್ಯೋತಿ ಮಲ್ಲಿಕಾರ್ಜುನ್ “ತಾಮ್ರದ ಮೂರ್ತಿ’ಯನ್ನು ದೇವಾಲಯಕ್ಕೆ ಕೊಟ್ಟಿದ್ದಾರೆ. ಮೂಲ ವಿಗ್ರಹದ ಜತೆಗೆ ಇವುಗಳಿಗೂ ನಿತ್ಯ ಪೂಜಾ ಕೈಂಕರ್ಯಗಳು ಸಲ್ಲುತ್ತಿವೆ. ಗಾಳಿ ಸಂಬಂಧಿತ ದೆವ್ವ-ಪೀಡೆ, ಸೋಕು, ಮಾಠ-ಮಂತ್ರಗಳಿಂದ ತೊಂದರೆಗೆ ಒಳಗಾದವರು ಬರುತ್ತಾರೆ. ನಿವಾರಣೆಗೆ ಮೊರೆ ಇಡುತ್ತಾರೆ. ಸಮಸ್ಯೆ ಪರಿಹಾರ ಆಗುವ ತನಕ ಕಟ್ಟಲೆ ಇರುವುದೂ ಉಂಟು. ಅನೇಕರು ಇಲ್ಲಿ ಒಳಿತು ಕಂಡಿದ್ದಾರೆ ಎಂದು ಇಲ್ಲಿ ದಾಸೋಹ ಕೊಠಡಿ ಕಟ್ಟಿಸಿರುವ ಚಿಕ್ಕನಲ್ಲೂರು ಸಿದ್ರಾಮಣ್ಣ ವಿವರಿಸುತ್ತಾರೆ.
ಗುರು ಕರಿಬಸವೇಶ್ವರರು ಯೋಗಿಗಳು, ಪವಾಡ ಪುರುಷರು. ಅವರ ಅನುಗ್ರಹದಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಬೇಡಿಕೆಗಳು ಈಡೇರುತ್ತವೆ. ಹೆಚ್ಚಿನ ಭಕ್ತರು, ಜಾತ್ರಾ ಮಹೋತ್ಸವಕ್ಕೆ ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುವಂತೆ ದೇವಾಲಯ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.