ಅಜ್ಜಂಪುರ: ಅಂತರಗಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಟ್ಟಡ ಉದ್ಘಾಟನೆ ಭಾಗ್ಯ ಕಾಣದೇ ಅನಾಥವಾಗಿದೆ. ಕಟ್ಟಡದ ಸುತ್ತಮುತ್ತಲಿನ ಜಾಗವನ್ನು ಕುಡುಕರು ಅಡ್ಡೆಯಾಗಿಸಿಕೊಂಡಿದ್ದಾರೆ. ಕಟ್ಟಡದ ಆಸುಪಾಸಿನಲ್ಲಿ ಮದ್ಯದ ಪೌಚ್‌ಗಳು, ಬಾಟಲಿಗಳು, ಬೀಡಿ, ಸಿಗರೇಟಿನ ತುಂಡುಗಳು ಬಿದ್ದಿವೆ.
ಒಡೆದ ಬಾಟಲಿಯ ಗಾಜುಗಳು ಚೆಲ್ಲಾಡಿವೆ. ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಡುತ್ತಿದೆ. ಗ್ರಾಮ ಸುತ್ತಲಿನ ಬೇಗೂರು, ಅರಬಲ, ಬೂತನಹಳ್ಳಿ, ಹೆಗ್ಗಡಿಹಳ್ಳಿ, ಹೂಲಿಹಳ್ಳಿ, ಹಡಗಲು, ತಿಮ್ಮಾಪುರ, ಆದ್ರಿಗಟ್ಟೆ, ಸಂಕ್ಲಾಪುರ, ಅನ್ವರ್ ಕಾಲೋನಿ ಸೇರಿದಂತೆ ಹಲವು ಹಳ್ಳಿಗಳ ರೋಗಿಗಳು ಚಿಕಿತ್ಸೆಗೆ ಅಂತರಗಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಆಶ್ರಯಿಸಿದ್ದಾರೆ. ಹಾಗಾಗಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿದೆ.
ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ಕಟ್ಟಡ ಚಿಕ್ಕದಾಗಿದೆ. ಏಳೆಂಟು ರೋಗಿಗಳು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಹೆಚ್ಚಿನ ರೋಗಿಗಳು ಒಮ್ಮೆಲೆ ಬಂದಾಗ ಕೂರಲು ಜಾಗ ಇಲ್ಲ. ಕೆಲಗಂಟೆಗಳ ಕಾಲ ಒಳರೋಗಿಯಾಗಿ ಚಿಕಿತ್ಸೆ ಪಡೆಯಲು ಸ್ಥಳಾವಕಾಶದ ಕೊರತೆ ಇದೆ. ಕೂಡಲೇ ಕಟ್ಟಡವನ್ನು ಉದ್ಘಾಟಿಸಿ, ಕಟ್ಟಡದಲ್ಲಿ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗರ್ಭಿಣಿ, ಬಾಣಂತಿಯರು, ವಯೋವೃದ್ಧರು ಸೇರಿದಂತೆ ದಿನವೊಂದಕ್ಕೆ 80-140 ರಷ್ಟು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿನ ಆರೋಗ್ಯ ಕೇಂದ್ರ ಸಂಪರ್ಕಿಸುತ್ತಾರೆ. ಈಗಿನ ಕಟ್ಟಡದಲ್ಲಿನ ಜಾಗ ಕಿರಿದಾಗಿದ್ದು, ರೋಗಿಗಳ ತಪಾಸಣೆ, ಚಿಕಿತ್ಸೆಗೆ ತೊಂದರೆಯುಂಟಾಗಿದೆ ಎನ್ನುತ್ತಾರೆ ವೈದ್ಯೆ ಡಾ.ಪವಿತ್ರಾ ರಾಣಿ.
ಕಟ್ಟಡ ಉದ್ಘಾಟನೆ ಸಂಬಂಧ ಶಾಸಕರ ಜತೆ ಚರ್ಚಿಸಿದ್ದೇವೆ. ಫೆ.6 ಇಲ್ಲವೇ 7 ರಂದು ಕಟ್ಟಡ ಉದ್ಘಾಟನೆ ನಡೆಯಲಿದೆ. ಬಳಿಕ ಸಾರ್ವಜನಿಕ ಸೇವೆಗೆ ಕಟ್ಟಡವನ್ನು ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಭು ತಿಳಿಸಿದ್ದಾರೆ.