ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ನಟ ದತ್ತಣ್ಣ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಅಜ್ಜ’ ಚಿತ್ರ ನಾಳೆ (ಡಿ. 28) ತೆರೆಗೆ ಬರುತ್ತಿದೆ. ಈ ಹಿಂದೆ ಎರಡು-ಮೂರು ಬಾರಿ ಚಿತ್ರದ ಬಿಡುಗಡೆಯನ್ನು “ಅಜ್ಜ’ ಚಿತ್ರತಂಡ ಘೋಷಿಸಿದ್ದರೂ, ಥಿಯೇಟರ್ ಸಮಸ್ಯೆ ಮತ್ತಿತರ ತಾಂತ್ರಿಕ ಕಾರಣಗಳಿಂದ ಚಿತ್ರವನ್ನು ಅಂದುಕೊಂಡ ಸಮಯಕ್ಕೆ ಸರಿಯಾಗಿ ತೆರೆಗೆ ತರಲು ಸಾಧ್ಯವಾಗಿರಲಿಲ್ಲ. ಇವೆಲ್ಲದರ ನಡುವೆಯೇ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಚಿತ್ರ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದ ಚಿತ್ರತಂಡ, ಅಂತೂ ವರ್ಷಾಂತ್ಯಕ್ಕೆ ತೆರೆಮೇಲೆ “ಅಜ್ಜ’ ನನ್ನು
ಕರೆತರುತ್ತಿದೆ.
ಕನ್ನಡದ ಸದಭಿರುಚಿ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ವೇಮಗಲ್ ಜಗನ್ನಾಥ್ ರಾವ್ “ಅಜ್ಜ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾದೇಶ್ವರ್ ಆರ್ಟ್ಸ್ ಬ್ಯಾನರ್‌ನಲ್ಲಿ ಕೆ.ಪಿ ಚಿದಾನಂದ್ “ಅಜ್ಜ’ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. “ಅಜ್ಜ’ ಚಿತ್ರದ ಶೀರ್ಷಿಕೆಗೆ “ಆನ್ ಟೋಲ್ಡ್ ರಿಯಲ್ ಮಿಸ್ಟರಿ’ ಎಂಬ ಅಡಿಬರಹವಿದ್ದು, ಸಸ್ಪೆನ್ಸ್-ಥ್ರಿಲ್ಲರ್ ಕಥಾನಕ ಚಿತ್ರದಲ್ಲಿದೆ.
ಮಹಾನಗರದಲ್ಲಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಗಿಸಿದ ನಾಲ್ವರು ವಿದ್ಯಾರ್ಥಿಗಳ ತಂಡ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆಯನ್ನು ನೀಡಲು ಗುಡ್ಡಗಾಡು ಪ್ರದೇಶದ ಹಳ್ಳಿಯೊಂದಕ್ಕೆ ಬರುತ್ತದೆ. ಅಲ್ಲಿ ತಮಗೆ ಅರಿವಿಲ್ಲದಂತೆ, ನಿಗೂಢ ಸ್ಥಳವೊಂದರಲ್ಲಿ ಈ ವಿದ್ಯಾರ್ಥಿಗಳು ಸಿಲುಕಿಕೊಳ್ಳುತ್ತಾರೆ. ಅಂತಿಮವಾಗಿ ಆ ಸ್ಥಳದಲ್ಲಿ ಏನೇನು ನಡೆಯುತ್ತದೆ? ಅಲ್ಲಿಂದ ಈ ವಿದ್ಯಾರ್ಥಿಗಳು ಹೊರಬರುತ್ತಾರಾ? ಇಲ್ಲಾವಾ? ಎನ್ನುವುದೇ “ಅಜ್ಜ’ ಚಿತ್ರದ ಕಥಾಹಂದರ.
ಇನ್ನು “ಅಜ್ಜ’ ಚಿತ್ರದಲ್ಲಿ ದತ್ತಣ್ಣ ಅವರ ಜೊತೆ ಬೇಬಿ ಕೃತಿಶ್ರೀ, ದೀಪಕ್ ರಾಜ್, ರಾಜ್ ನವೀನ್, ಮಾಧುರಿ, ಅಶ್ವಿನಿ, ಲತೀಶ್ ಕೂರ್ಗ್ ಹಾಗೂ ಇನ್ನಿತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸಾಯಿಕಿರಣ್ ಈ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ರಾಜು ಶಿರಾಳಕೊಪ್ಪ ಛಾಯಾಗ್ರಹಣ, ಶಿವಯಾದವ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. “ಅಜ್ಜ’ ಚಿತ್ರ ರಾಜ್ಯದಾದ್ಯಂತ ಸುಮಾರು ನಲವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.