ಮುಂಬೈ : ಮಹಾರಾಷ್ಟ್ರ ರಾಜಕೀಯ ದಿನಕಳೆದಂತೆ ಮತ್ತಷ್ಟು ಗೋಜಲಾಗುತ್ತಿದೆ. ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಲು ಕೆಲವೇ ಗಂಟೆಗಳು ಬಾಕಿ ಉಳಿದಂತೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಅಜಿತ್ ಪವಾರ್ ಭೇಟಿಯಾಗಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.
ನಿನ್ನೆ ತಡರಾತ್ರಿ ಹೋಟೇಲ್ ಕೊಠಡಿಯಲ್ಲಿ ಶರದ್ ಮತ್ತು ಅಜಿತ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೊತೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರೀಯಾ ಸುಳೆ ಅವರೂ ಇದ್ದರು ಎಂದು ವರದಿಯಾಗಿದೆ.
ಅಜಿತ್- ಶರದ್ ಭೇಟಿಯಾಗಿ ಯಾವುದರ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಇನ್ನೂ ಬಹಿರಂಗವಾಗಿಲ್ಲ. ಶರದ್ ಪವಾರ್ ಅವರು ಅಳಿಯ ಅಜಿತ್ ಪವಾರ್ ಅವರನ್ನು ಪಕ್ಷಕ್ಕೆ ಮರಳುವಂತೆ ಮನವೊಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಮಧ್ಯೆ ಅಜಿತ್ ಪವಾರ್ ಅವರು ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆಯನ್ನು ಮನವೊಲಿಸಿ ಪೂರ್ಣ ಎನ್ ಸಿಪಿ ಪಕ್ಷ ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ.