ಮುಂಬೈ: ನಾಟಕೀಯ ತಿರುವುಗಳನ್ನು ಕಂಡ ಮಹಾರಾಷ್ಟ್ರ ಸರ್ಕಾರ ರಚನೆಯ ಗೊಂದಲ ಮುಗಿದು ಎಲ್ಲವೂ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸರ್ಕಾರ ರಚಿಸುವಂತೆ ನಮ್ಮನ್ನು ಸಂಪರ್ಕಿಸಿದ್ದೇ ಅಜಿತ್ ಪವಾರ್. ಅವರು ತಾವಾಗಿಯೇ ನಮ್ಮ ಬಳಿ ಬಂದಿದ್ದರು. ಅಷ್ಟೇ ಅಲ್ಲ, ಈ ಎಲ್ಲ ವಿಚಾರವೂ ಎನ್‌ಸಿಪಿ ವರಿಷ್ಠ ಶರದ್ ಪವಾರ್‌ಗೆ ಗೊತ್ತಿತ್ತು ಎಂದು ಫಡ್ನವೀಸ್ ಹೇಳಿದ್ದಾರೆ.
ಮರಾಠಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಫಡ್ನವೀಸ್ ಈ ವಿಚಾರ ತಿಳಿಸಿದ್ದಾರೆ. “ನಾವು ಬಿಜೆಪಿ ಜತೆ ಕೈಜೋಡಿಸಲು ಇಚ್ಛಿಸುತ್ತೇವೆ ಎಂದು ಎನ್‌ಸಿಪಿಯ ಬಹುತೇಕ ಶಾಸಕರು ಹೇಳುತ್ತಿದ್ದಾರೆ ಎಂದು ಅಜಿತ್ ಪವಾರ್ ನನ್ನೊಂದಿಗೆ ಹೇಳಿದರು. ನಾವು ಯಾವುದೇ ಶಾಸಕರನ್ನು ಖರೀದಿಸಲು ಯತ್ನಿಸಿಲ್ಲ. ಯಾವ ಪಕ್ಷವನ್ನೂ ಒಡೆಯಲು ಮುಂದಾಗಿಲ್ಲ. ಸ್ವತಃ ಅಜಿತ್ ಅವರೇ ನಮ್ಮ ಬಳಿ ಬಂದು, ಎನ್‌ಸಿಪಿಯ ಎಲ್ಲ ಶಾಸಕರೂ ಬಿಜೆಪಿ ಜತೆ ಬರಲು ಸಿದ್ಧವಾಗಿದ್ದಾರೆ ಎಂದರು. ಅಲ್ಲದೆ, ಈ ಎಲ್ಲ ವಿಷಯ ಶರದ್ ಪವಾರ್‌ರಿಗೂ ತಿಳಿಸಿದ್ದೇನೆ ಎಂದೂ ಹೇಳಿದರು’ ಎಂದಿದ್ದಾರೆ ಫಡ್ನವೀಸ್.
ಸಮಯ ಬಂದಾಗ ಉತ್ತರಿಸುವೆ:
ಇದೇ ವೇಳೆ, “ಪ್ರಧಾನಿ ಮೋದಿ ನೀಡಿದ ಆಫರ್ ಅನ್ನು ತಿರಸ್ಕರಿಸಿದೆ’ ಎಂದು ಇತ್ತೀಚೆಗೆ ಶರದ್ ಪವಾರ್ ಹೇಳಿದ್ದರು. ಆದರೆ, ಪವಾರ್ ಹೇಳಿರುವುದು ಅರ್ಧ ಸತ್ಯ. ಪ್ರಧಾನಿ ಮೋದಿ ಮತ್ತು ಪವಾರ್ ನಡುವೆ ನಡೆದ ಸಂಭಾಷಣೆಯ ಬಗ್ಗೆ ನನಗೆ ಗೊತ್ತಿದೆ. ಈಗ ಅದನ್ನು ಬಹಿರಂಗಪಡಿಸುವುದು ಅಸಾಧ್ಯ. ಸಮಯ ಬಂದಾಗ ನಾನೇ ಅದನ್ನು ಹೇಳುತ್ತೇನೆ ಎಂದೂ ಫಡ್ನವೀಸ್ ಹೇಳಿದ್ದಾರೆ.