Advertisement

ಕೃಷಿಯನ್ನೇ ಉಸಿರಾಗಿಸಿದ ನೇಗಿಲ ಯೋಗಿ

08:26 PM Jan 07, 2020 | mahesh |

ಹೆಸರು: ಅಜಿತ್‌ ಕುಮಾರ್‌ ಆರಿಗ
ಏನು ಕೃಷಿ: ಹೈನುಗಾರಿಕೆ,
ಭತ್ತ, ಅಡಿಕೆ, ಕೊಕ್ಕೋ, ಕರಿಮೆಣಸು
ವಯಸ್ಸು: 60
ಕೃಷಿ ಪ್ರದೇಶ: 6 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೆಳ್ತಂಗಡಿ: ವಂಶಪಾರಂಪರ್ಯದಿಂದ ಬಂದಿದ್ದ ಕೃಷಿ ಕಾಯಕ ಉಳಿಸುವ ಉದ್ದೇಶದಿಂದ ಪ್ರಯೋಗಶೀಲತೆಯಿಂದ ಭತ್ತ, ಅಡಿಕೆ, ಹತ್ತು ಹಲವಾರು ಬಗೆಯ ತರಕಾರಿ ಬೆಳೆಯುವ ಮೂಲಕ ಕೃಷಿ ಬದುಕು ಕಟ್ಟಿಕೊಂಡ ಸಮಗ್ರ ಕೃಷಿಯ ಸರದಾರ ನಡ ಗ್ರಾಮದ ಒಳಬೈಲು ನಿವಾಸಿ ಅಜಿತ್‌ ಕುಮಾರ್‌ ಆರಿಗ. ಎಸೆಸೆಲ್ಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ತನ್ನ 16ನೇ ವಯಸ್ಸಿನಲ್ಲಿ ಕೃಷಿ ಚಟುವಟಿಕೆಗೆ ಧುಮುಕಿದ ಅಜಿತ್‌ ಇದೀಗ 60 ವರ್ಷ ಸಂದರೂ ಉತ್ಸಾಹ ಕುಂದಿಲ್ಲ. ಸತತ 40 ವರ್ಷಗಳಿಂದ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿ ಕೃಷಿಕರಾಗಿದ್ದಾರೆ. 6 ಎಕ್ರೆ ಗದ್ದೆಯಲ್ಲಿ ಅಡಿಕೆ, ಭತ್ತ, ತೆಂಗು, ರಬ್ಬರ್‌, ಕೊಕ್ಕೋ, ಕಾಣುಮೆಣಸು ಜತೆಗೆ ಹೈನುಗಾರಿಕೆಯ ಮೂಲಕ ನೆಮ್ಮದಿ ಜೀವನ ಕಂಡಿದ್ದಾರೆ. ಆದರೆ ಕೂಲಿ ಆಳುಗಳ ಕೊರತೆ ಕಾಡುತ್ತಿದ್ದರಿಂದ 2005ರಲ್ಲೇ ಯಾಂತ್ರೀಕೃತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸಮಯ – ಶ್ರಮ – ವೆಚ್ಚದಲ್ಲಿ ಉಳಿಕೆ ಮಾಡಿ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ.

ಒಟ್ಟು 3 ಎಕ್ರೆಯಲ್ಲಿ 1,500 ಅಡಿಕೆ, 100 ತೆಂಗು, 750 ಕೊಕ್ಕೋ, 300 ಬುಡ ಕಾಳುಮೆಣಸು, ರಬ್ಬರ್‌ ಬೆಳೆಯಲ್ಲಿ ಆದಾಯ ಪಡೆಯುತ್ತಿದ್ದಾರೆ. ಕೊಕ್ಕೋ ಸೀಸನ್‌ನಲ್ಲಿ ವಾರಕ್ಕೆ ಸರಾಸರಿ ಕ್ವಿಂಟಾಲ್‌ ಇಳುವರಿ ಪಡೆಯುತ್ತಾರೆ. ಈ ಮೂಲಕ ಸಮಗ್ರ ಕೃಷಿಗೆ ಒತ್ತು ನೀಡಿದ್ದಾರೆ.

ಎರಡು ಬೆಳೆ
ಒಂದೂವರೆ ಎಕ್ರೆ ಗದ್ದೆಯಲ್ಲಿ ಮುಂಗಾರು-ಹಿಂಗಾರು ಸೇರಿ ಎರಡು ಬೆಳೆಯಾಗಿ ಎಂಒ4, ಕಜೆ ಜಯ, ಅಜಿಪ ಪಿಳ್ಳೆ ತಳಿ ಬೇಸಾಯ ಮಾಡುತ್ತಿದ್ದು, ಹಿಂದೆ ಮೂರು ಅವಧಿಗೆ ಬೇಸಾಯ ನಡೆಸುತ್ತಿದ್ದರು. ಕೃಷಿ ಕಾರ್ಮಿಕರ ಕೊಂಚ ಸಮಸ್ಯೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದರಿಂದ ಎರಡು ಬೆಳೆ ಬೆಳೆಯುತ್ತಿದ್ದಾರೆ. 2017ರಲ್ಲಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಅಂದಿನ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಅಜಿತ್‌ ಕುಮಾರ್‌ ಅವರ ಭತ್ತದ ಗದ್ದೆಯಲ್ಲಿ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆ ಉದ್ಘಾಟಿಸಿದ್ದರು.

Advertisement

40 ಲೀ. ಹಾಲು
ಕೃಷಿ ಭೂಮಿ ಹೊಂದಿರುವವರಿಗೆ ಹೈನುಗಾರಿಕೆ ಅವಿಭಾಜ್ಯ. ಸಾವಯವ ಗೊಬ್ಬರ ಬಳಸುವ ದೃಷ್ಟಿಯಿಂದ ಹಾಗೂ ಆದಾಯದ ದೃಷ್ಟಿಯಿಂದ 6 ಹಸು (ಜರ್ಸಿ, ಎಚ್‌ಎಫ್‌) ತಳಿಗಳಿಂದ ಪ್ರತಿನಿತ್ಯ 40 ಲೀ. ಹಾಲು ಡೇರಿಗೆ ನೀಡುತ್ತಿದ್ದಾರೆ. ಬೆಳಗ್ಗೆ 5ರಿಂದ 10 ಗಂಟೆವರೆಗೆ ಹೈನುಗಾರಿಕೆ ಹಾಗೂ ಕೃಷಿಯಲ್ಲಿ ತೊಡಗಿಸುಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿದ್ದಾರೆ. ಹಾಲು ಕರೆಯಲು ಯಂತ್ರವನ್ನು ಬಳಸುವ ಮೂಲಕ ಸಮಯ ಹಾಗೂ ಶ್ರಮದ ಉಳಿತಾಯವಾಗುತ್ತಿದೆ.

ಪ್ರಶಸ್ತಿ -ಸಮ್ಮಾನ
2016-17ರಲ್ಲಿ ನಡೆದಲ್ಲಿ ನಡೆದ ಜಿಲ್ಲಾ ಮಟ್ಟದ ಕೃಷಿ ಸ್ಪರ್ಧೆಯಲ್ಲಿ ಮುಂಗಾರು ಭತ್ತ ಇಳುವರಿಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ.
2012ರಲ್ಲಿ ನಬಾರ್ಡ್‌ನಿಂದ ಆಯೋಜಿಸಿದ್ದ ರೈತ ಜಾತ್ರೆಯಲ್ಲಿ ಪ್ರಗತಿಪರ ಕೃಷಿಕ ಪ್ರಶಸ್ತಿ.
2012ರಲ್ಲಿ ಸಂಘ-ಸಂಸ್ಥೆಗಳಿಂದ ಉತ್ತಮ ಪ್ರಗತಿಪರ ಕೃಷಿಕ ಪ್ರಶಸ್ತಿ.

 1,500 ಅಡಿಕೆ ಮರ
 1.30 ಎಕ್ರೆ ಗದ್ದೆ, 25 ಕ್ಷಿಂಟಾಲ್‌ ಭತ್ತ
 740 ಕೊಕ್ಕೋ ಗಿಡ
 300 ಬುಡ ಕರಿಮೆಣಸು
 100 ತೆಂಗಿನ ಮರ
 6 ಹಸು 40 ಲೀ. ಹಾಲು
 ಮೊಬೈಲ್‌ ಸಂಖ್ಯೆ- 9972990442

ಏಳುಬೀಳು ಕಂಡಿದ್ದೇನೆ
ಕೃಷಿಯಲ್ಲಿ ಅಧುನಿಕತೆ ಅನುಸರಿಸುವುದು ಅನಿವಾರ್ಯವಾಗಿದೆ. 40 ವರ್ಷಗಳಿಂದ ಕೃಷಿಯಲ್ಲಿ ಹಲವು ಏಳುಬೀಳು ಕಂಡಿದ್ದೇನೆ. ಕಾರ್ಮಿಕರ ಕೊರತೆ ನೀಗಿಸಲು ಅಂದೇ ಯಾಂತ್ರೀಕೃತ ವಿಧಾನ ಅನುಸರಿಸಿದ್ದೇನೆ. ಕೃಷಿ ಜತೆಗೆ ನಾವು ನಿರಂತರ ಸಂಪರ್ಕದಿಂದರಬೇಕು. ಜತೆಗೆ ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಇಳುವರಿ ಪಡೆಯಲು ಸಹಾಯವಾಗುತ್ತದೆ.
-ಅಜಿತ್‌ ಕುಮಾರ್‌ ಆರಿಗ, ಸಮಗ್ರ ಕೃಷಿಕರು

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next