ಹೊಸದಿಲ್ಲಿ: ರಷ್ಯಾ ಮತ್ತು ಉಕ್ರೇನ್ (Russia-Ukraine War) ನಡುವಿನ ಯುದ್ದ ಇನ್ನೂ ಮುಂದುವರಿದಿದೆ. ಕದನ ವಿರಾಮದ ಯಾವುದೇ ಲಕ್ಷಣಗಳು ಗೋಚರಿಸಿದ ಈ ಸಮಯದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) ಅಜಿತ್ ದೋವಲ್ (Ajit Doval) ಅವರು ಈ ವಾರದಲ್ಲಿ ಮಾಸ್ಕೋಗೆ ಭೇಟಿ ನೀಡಲಿದ್ದಾರೆ. ಅಲ್ಲಿ ರಷ್ಯಾ – ಉಕ್ರೇನ್ ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾ ಮತ್ತು ಉಕ್ರೇನ್ ಗೆ ಭೇಟಿ ನೀಡಿ ಅದರ ನಾಯಕರಾದ ವ್ಲಾಡಿಮಿರ್ ಪುಟಿನ್ (Vladimir Putin) ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರನ್ನು ಭೇಟಿಯಾದ ನಂತರ ಈ ಬೆಳವಣಿಗೆ ನಡೆದಿದೆ.
ಅವರ ಭೇಟಿಯ ಸಮಯದಲ್ಲಿ, ಮಾಜಿ ಐಪಿಎಸ್ ಅಧಿಕಾರಿ ದೋವಲ್ ಅವರು BRICS-NSA ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಸ್ಕೋದಲ್ಲಿ ಜುಲೈನಲ್ಲಿ ನಡೆದ ಶೃಂಗಸಭೆಯ ಚರ್ಚೆಗಳನ್ನು ಅನುಸರಿಸುವ ಸಾಧ್ಯತೆಯೊಂದಿಗೆ ದೋವಲ್ ರಷ್ಯಾ ಮತ್ತು ಚೀನಾದ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.
ಉಕ್ರೇನ್ ಪ್ರವಾಸ ಮತ್ತು ಅಧ್ಯಕ್ಷ ಝೆಲೆನ್ಸ್ಕಿಯೊಂದಿಗಿನ ಭೇಟಿಯ ಸ್ವಲ್ಪ ಸಮಯದ ನಂತರ, ಪ್ರಧಾನಿ ಮೋದಿ ಅವರು ಆಗಸ್ಟ್ 27 ರಂದು ಅಧ್ಯಕ್ಷ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಮೂಲಗಳ ಪ್ರಕಾರ ಎನ್‌ಎಸ್‌ಎ ಮುಖ್ಯಸ್ಥ ದೋವಲ್ ಅವರನ್ನು ಮಾಸ್ಕೋಗೆ ಕಳುಹಿಸಲು ಈ ದೂರವಾಣಿ ಮಾತುಕತೆಯ ವೇಳೆ ನಿರ್ಧರಿಸಲಾಗಿತ್ತು ಎನ್ನಲಾಗಿದೆ.