Advertisement
ಅರ್ಜಿ ಸಲ್ಲಿಸಿದ ಪ್ರಮುಖರೆಂದರೆ ಅಜಿತ್ ಅಗರ್ಕರ್, ಚೇತನ್ ಶರ್ಮ, ಮಣಿಂದರ್ ಸಿಂಗ್ ಮತ್ತು ಶಿವಸುಂದರ್ ದಾಸ್. ಇವರಲ್ಲಿ ಚೇತನ್ ಶರ್ಮ ಮತ್ತು ಮಣಿಂದರ್ ಇಬ್ಬರೂ ಉತ್ತರ ವಲಯದವರಾದ್ದರಿಂದ ಒಬ್ಬರಿಗಷ್ಟೇ ಅವಕಾಶ ಲಭಿಸಲಿದೆ. ಇಬ್ಬರೂ ಭಾರತದ ಪರ ಬಹಳಷ್ಟು ಪಂದ್ಯಗಳನ್ನಾಡಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ಅವರಿಗಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಇವರದಾಗಿದೆ. ಉಳಿದಂತೆ ಅಜಿತ್ ಅಗರ್ಕರ್ ಪಶ್ಚಿಮ ವಲಯ ಹಾಗೂ ದಾಸ್ ಪೂರ್ವ ವಲಯದ ಪ್ರತಿನಿಧಿಗಳಾಗಿದ್ದಾರೆ.
ಹರ್ಯಾಣದ ಚೇತನ್ ಶರ್ಮ ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ (1987). ಕಪಿಲ್, ಗಾವಸ್ಕರ್, ವೆಂಗ್‌ಸರ್ಕಾರ್ ಮೊದಲಾದವರೊಂದಿಗೆ ಕ್ರಿಕೆಟ್ ಆಡಿರುವ ಶರ್ಮ, ಒಟ್ಟು 88 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಿಲ್ಲಿಯ ಆಫ್ಸ್ಪಿನ್ನರ್ ಮಣಿಂದರ್ 94 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವಿ. ಬೇಡಿ ಅವರ ಸಮರ್ಥ ಉತ್ತರಾಧಿಕಾರಿ ಎಂದು ಆ ಕಾಲದಲ್ಲಿ ಗುರುತಿಸಿಕೊಂಡಿದ್ದರು.
ಇವರಿಬ್ಬರ ಅರ್ಜಿ ಬಹಳ ಮಹತ್ವದ್ದಾಗಿದ್ದು, ಉತ್ತರ ವಲಯಕ್ಕೆ ಖಂಡಿತವಾಗಿಯೂ ಗಟ್ಟಿ ಪ್ರಾತಿನಿಧ್ಯ ಲಭಿಸಿದಂತಾಗುತ್ತದೆ ಎಂದು ಬಿಸಿಸಿಐ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ಸಲ ಉತ್ತರ ವಲಯವನ್ನು ಪ್ರತಿನಿಧಿಸಿದ್ದ ಶರಣ್‌ದೀಪ್ ಸಿಂಗ್ ಕೇವಲ 10 ಅಂತಾರಾಷ್ಟ್ರೀಯ ಪಂದ್ಯಗಳನ್ನಷ್ಟೇ ಆಡಿದ್ದರು.
Related Articles
Advertisement
ದಾಸ್-ಬೋಸ್ ಸ್ಪರ್ಧೆಒಡಿಶಾದ ಶಿವಸುಂದರ್ ದಾಸ್ ಮಾಜಿ ಆರಂಭಿಕನಾಗಿದ್ದು, 23 ಟೆಸ್ಟ್‌ಗಳಿಂದ 1,326 ರನ್ ಬಾರಿಸಿದ್ದಾರೆ. ಬಂಗಾಲದ ಮಾಜಿ ಪೇಸ್ ಬೌಲರ್ ರಣದೇಬ್ ಬೋಸ್ ಕೂಡ ಅರ್ಜಿ ಸಲ್ಲಿಸಿದ್ದಾಗಿ ವರದಿಯಾಗಿದೆ. ಆಗ ದಾಸ್ ಮತ್ತು ಬೋಸ್ ನಡುವೆ ಸ್ಪರ್ಧೆ ಏರ್ಪಡುವುದು ಖಚಿತ. ಪ್ರಸ್ತುತ ಆಯ್ಕೆ ಸಮಿತಿಯಲ್ಲಿ ದಕ್ಷಿಣ ವಲಯದ ಸುನೀಲ್ ಜೋಶಿ ಅವರನ್ನು ಹೊರತುಪಡಿಸಿ ಕಾರ್ಯಪ್ರವೃತ್ತರಾಗಿರುವ ಮತ್ತೋರ್ವ ಸದಸ್ಯನೆಂದರೆ ಮಧ್ಯ ವಲಯದ ಹರ್ವಿಂದರ್ ಸಿಂಗ್.