ಬಂಟ್ವಾಳ/ಪುಂಜಾಲಕಟ್ಟೆ: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯ ಬಳಿಯಲ್ಲೇ ತೋಡೊಂದಕ್ಕೆ ಮೀನು ಹಿಡಿಯಲು ಗಾಳ ಹಾಕುತ್ತಿದ್ದ ಯುವಕನೋರ್ವ ನದಿಗೆ ಬಿದ್ದು ನೀರು ಪಾಲಾದ ಘಟನೆ ಗುರುವಾರ ಸಂಜೆ ಬಂಟ್ವಾಳ-ಬೆಳ್ತಂಗಡಿ ಗಡಿ ಪ್ರದೇಶದ ಅಜಿಲಮೊಗರು ಕೂಟೇಲು ಬಳಿ ಸಂಭವಿಸಿದೆ.
ಸುರತ್ಕಲ್ ಕಾನ ಮೂಲದ ಮೈಕಲ್ (32) ನಾಪತ್ತೆಯಾದವರು. ಅವರು ಸ್ನೇಹಿತ ಸುದೀಪ್ ಜತೆ ಬಂದಿದ್ದರು. ಸುದೀಪ್ ಅವರ ಭಾವನ ಮನೆ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಸಮೀಪದಲ್ಲಿದ್ದು, ಅಲ್ಲಿಗೆ ಮಧ್ಯಾಹ್ನ 2ರ ಸುಮಾರಿಗೆ ಆಗಮಿಸಿದ್ದರು. ಬಳಿಕ ಊಟ ಮುಗಿಸಿ ಸಂಜೆ 5ರ ಸುಮಾರಿಗೆ ಮೀನು ಹಿಡಿಯಲು ಅಜಿಲಮೊಗರು ಭಾಗಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.
ಒಟ್ಟು ನಾಲ್ವರು ಮೀನು ಹಿಡಿಯಲು ಬಂದಿದ್ದು, ಇಬ್ಬರು ಮನೆಗೆ ತೆರಳಿದ್ದರು. ಬಳಿಕ ಇಬ್ಬರೇ ಇದ್ದಾಗ ಘಟನೆ ನಡೆದಿದೆ. ಮೈಕಲ್ ಅವರು ನೀರಿಗೆ ಬಿದ್ದು ರಕ್ಷಿಸುವಂತೆ ಕೈ ಮೇಲೆ ಎತ್ತಿ ಬೊಬ್ಬೆ ಹಾಕಿದ್ದು ಆದರೆ ನೀರು ವೇಗದಿಂದ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ನೇರವಾಗಿ ತೋಡಿನಿಂದ ನೇತ್ರಾವತಿ ನದಿಯ ಕಡೆಗೆ ಕೊಚ್ಚಿ ಹೋಗಿದ್ದಾರೆ.
ಮೈಕೆಲ್ ಕೆಲವು ವರ್ಷಗಳ ಕಾಲ ವಿದೇಶದಲ್ಲಿದ್ದು, ಬಳಿಕ ಊರಿಗೆ ಮರಳಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೈಕಲ್ ಅವರ ಸಹೋದರ ಆಗಮಿಸಿದ್ದು, ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಹರೀಶ್ ಅವರು ಮಾಹಿತಿ ನೀಡಿದ್ದಾರೆ. ಘಟನೆಯು ಉಪ್ಪಿನಂಗಡಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಗಡಿ ಪ್ರದೇಶದಲ್ಲಿ ನಡೆದಿದೆ.
ಅಜಿಲಮೊಗರು ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ಸೇರುವ ಪಕ್ಕದಲ್ಲೇ ತೋಡಿಗೆ ಅಡ್ಡವಾಗಿ ನಿರ್ಮಿಸಿರುವ ಹಳೆಯ ಕಿಂಡಿ ಅಣೆಕಟ್ಟಿನ ಮೇಲೆ ನಿಂತು ಗಾಳ ಹಾಕುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ತೋಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹೀಗಾಗಿ ಘಟನೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದವರು ನೋಡಿದರೂ ಏನೂ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ.