Advertisement

ಪುನಶ್ಚೇತನಗೊಳ್ಳಬೇಕಿದೆ ಐತಿಹಾಸಿಕ ಹಿನ್ನೆಲೆಯ ಅಜಿಲಕೆರೆ

05:10 AM May 25, 2018 | Team Udayavani |

ವೇಣೂರು: ಕಲ್ಲಾಣಿ ಪ್ರದೇಶದಲ್ಲಿರುವ ಅಜಿಲಕೆರೆಯು ಮೂಲೆಗುಂಪಾಗಿದ್ದು, ಅಭಿವೃದ್ಧಿಯಿಂದ ದೂರ ಉಳಿದಿದೆ.
ಕ್ರಿ.ಶ. 1604ರ ವೇಣೂರು ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲ್ಪಟ್ಟ ಸಮಯದಲ್ಲಿ ನೀರಿನ ಸೌಕರ್ಯಕ್ಕಾಗಿ ವೇಣೂರಿನ ಕೆರೆಕೋಡಿ ಬಳಿ 8.53 ಎಕ್ರೆ ವ್ಯಾಪ್ತಿಯಲ್ಲಿ ಎರಡು ಬೆಟ್ಟಗಳ ಮಧ್ಯೆ ಈ ಬೃಹತ್‌ ಕೆರೆಯನ್ನು ನಿರ್ಮಿಸಲಾಗಿತ್ತು. 2012ರಲ್ಲಿ ಸರಕಾರದಿಂದ ಕೆರೆಗಳ ಪುನಶ್ಚೇತನ ಯೋಜನೆಯಡಿ ಅಜಿಲ ಕೆರೆಯ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆಗೊಂಡಿತ್ತು. ಅಲ್ಲದೆ, ಜಿ.ಪಂ. ಅನುದಾನದಡಿ 10 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿತ್ತು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಭಾಗಶಃ ಹೂಳೆತ್ತುವ ನಡೆಸಲಾಗಿತ್ತು. ಆದರೆ ಆ ಬಳಿಕ ಕೆರೆಯ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಅಜಿಲಕೆರೆಯನ್ನು ಅಭಿವೃದ್ಧಿಗೊಳಿಸಿ ವೇಣೂರು ನಗರ ಭಾಗಕ್ಕೆ ನೀರು ಪೂರೈಕೆಗೆ ಅನುಕೂಲ ಮಾಡಿಕೊಟ್ಟರೆ ವೇಣೂರು ಸುತ್ತಮುತ್ತಲಿನ ನೀರಿನ ಸಮಸ್ಯೆ ನೀಗಲಿದೆ.

Advertisement

ಈಡೇರದ ಸಮಗ್ರ ಕುಡಿಯುವ ನೀರಿನ ಯೋಜನೆ
2012ರಲ್ಲಿ ಜರಗಿದ ವೇಣೂರು ಮಹಾಮಸ್ತಕಾಭಿಷೇಕದ ಸಮಯದಲ್ಲಿ ಸಮಿತಿ ಕಾರ್ಯಾಧ್ಯಕ್ಷ, ರಾಜ್ಯ ಸರಕಾರದ ದಿಲ್ಲಿ ಪ್ರತಿನಿಧಿಯೂ ಆಗಿದ್ದ ಮೂಲತಃ ವೇಣೂರಿನ ಧನಂಜಯ ಕುಮಾರ್‌ ಅವರು ವೇಣೂರಿನ ಸಮಗ್ರ ಕುಡಿಯುವ ನೀರು ಯೋಜನೆ ಬಗ್ಗೆ ಉಲ್ಲೇಖೀಸಿದ್ದರು. ಯೋಜನೆಯ ನೀಲನಕ್ಷೆ ಸಿದ್ಧಪಡಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯ ಸರಕಾರದಿಂದ 2 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದರು. ಆದರೆ ಆ ಬಳಿಕ ಸರಕಾರದ ಅಸ್ಥಿರತೆಯಿಂದ ಬೃಹತ್‌ ಯೋಜನೆ ಕೈತಪ್ಪಿತು. 

ಇದೀಗ ಈ ಅಜಿಲಕೆರೆ  ಹೂಳು ತುಂಬಿ ಜಲಮೂಲ ಬರಿದಾಗುತ್ತಿದೆ. ಹೂಳು ತೆಗೆದು ಅಭಿವೃದ್ಧಿಪಡಿಸುವಲ್ಲಿ ಪ್ರವಾಸೋದ್ಯಮ ಇಲಾಖೆ, ಜನಪ್ರತಿನಿಧಿಗಳು, ಸ್ಥಳೀಯಾಡಳಿತ ಚಿಂತನೆ ನಡೆಸಬೇಕಾಗಿದೆ. ಈ ಮೂಲಕ ಬೇಸಗೆಯಲ್ಲಿ ನೀರಿನ ಕೊರತೆ ಇರುವಂತಹ  ಪ್ರದೇಶಗಳಿಗೆ ಸೌಲಭ್ಯ ಕಲ್ಪಿಸಬಹುದು ಎನ್ನುವುದು ನಾಗರಿಕರ ಒತ್ತಾಸೆ.

ಅಭಿವೃದ್ಧಿ ಆಗಬೇಕಿದೆ ದೇಗುಲ
ಪುರಾತನ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಅರ್ಧದಲ್ಲಿ ಮೊಟಕುಗೊಂಡಿದ್ದು, ಧಾರ್ಮಿಕದತ್ತಿ ಇಲಾಖೆಯ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳಿಂದ ದೇಗುಲದ ಅಭಿವೃದ್ಧಿಗೆ ತೊಡಕಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶೀಘ್ರ ಚಾಲನೆ ದೊರೆಯಲಿ ಎಂಬುದು ನಾಗರಿಕರ ಆಶಯ.

ಇಲಾಖೆ ಕ್ರಮ ಕೈಗೊಳ್ಳಲಿ
ಕಂದಾಯ ಇಲಾಖೆಯು ವೇಣೂರಿನ ಅಜಿಲಕೆರೆಯನ್ನು ಪಂ.ಗೆ ಹಸ್ತಾಂತರಿಸಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕು. ಐತಿಹಾಸಿಕ ಹಿನ್ನೆಲೆಯ ಈ ಅಜಿಲಕೆರೆಯು ಕೆಲವರಿಂದ ಒತ್ತುವರಿಯಾಗಿದ್ದು, ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು.
– ಕೆ. ವಿಜಯ ಗೌಡ, ತಾ.ಪಂ. ಸದಸ್ಯರು, ವೇಣೂರು

Advertisement

ಅಜಿಲಕೆರೆ ಅಭಿವೃದ್ಧಿಯಾಗಲಿ
ಜಲಮೂಲಗಳ ಅಭಿವೃದ್ಧಿಗೊಳಿಸಿದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಮಳೆ ನೀರನ್ನು ಭೂಗರ್ಭಕ್ಕೆ ಸೇರಿಸುವ ಆವಿಷ್ಕಾರಗಳಿಗೆ ಯೋಜನೆ ರೂಪಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಅಜಿಲಕೆರೆಯನ್ನು ದುರಸ್ತಿಗೊಳಿಸಬೇಕು.
– ಪ್ರಭಾಕರ ಪ್ರಭು ವೇಣೂರು, ಸ್ಥಳೀಯರು

— ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next