ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ಅಸಲ್ಫಾದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಸಂಪೂರ್ಣ ಸಹಕಾರದೊಂದಿಗೆ ಜು. 20 ರಂದು ಸಂಜೆ 5 ರಿಂದ ಘಾಟ್‌ಕೋಪರ್ ಪೂರ್ವದ ಸುಭಾಶ್ ನಗರದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಸಭಾಂಗಣದಲ್ಲಿ ತಾಳಮದ್ದಳೆ ಮತ್ತು ಸಮ್ಮಾನ ಕಾರ್ಯಕ್ರಮವು ಜರಗಿತು.
ಇದೇ ಸಂದರ್ಭದಲ್ಲಿ ಬಳಗದ ನಾಮಾಂಕಿತ ಹಿರಿಯ ಅರ್ಥದಾರಿ ಶ್ಯಾಮ್‌ಭಟ್ ಪಕ್ಕಳಕುಂಜ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದತ್ತಾತ್ರೇಯ ಮಂದಿರದ ಧರ್ಮದರ್ಶಿ ದೇವು ಎಸ್. ಪೂಜಾರಿ ಅವರು ವಹಿಸಿದ್ದರು. ಪುರೋಹಿತ ಮಾಳ ಶ್ರೀನಿವಾಸ ಭಟ್ ಅವರು ಆಶೀರ್ವಚನ ನೀಡಿದರು.
ಯಕ್ಷಗಾನ ಕಲಾವಿದ ನಾರಾಯಣ ಬಂಗೇರ, ನ್ಯಾಯವಾದಿ ದಯಾನಂದ ಕೆ. ಶೆಟ್ಟಿ, ಉದ್ಯಮಿ ಶಿವಪ್ರಸಾದ್ ಶೆಟ್ಟಿ ತೋಕೂರುಗುತ್ತು, ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ, ಯಕ್ಷಗಾನ ಕಲಾವಿದ ಶ್ಯಾಮ್ ಭಟ್, ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಉಪಸ್ಥಿತರಿದ್ದರು.
ಸಮ್ಮಾನ ಪತ್ರವನ್ನು ಯಕ್ಷಗಾನ ಕಲಾವಿದ ಹರೀಶ್ ಭಟ್ ಬೊಳಂತಿಮೊಗರು ಅವರು ವಾಚಿಸಿದರು. ಕಾರ್ಯಕ್ರಮವನ್ನು ಅಶೋಕ್ ಪಕ್ಕಳ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರ ನೇತೃತ್ವದಲ್ಲಿ, ಅಜೆಕಾರು ಕಲಾಭಿಮಾನಿ ಬಳಗದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗರುಡ ಗರ್ವಭಂಗ ತಾಳಮದ್ದಳೆ ನಡೆಯಿತು. ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಆಜೇರು, ಚೆಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ಶ್ರೀಪತಿ ನಾಯಕ್ ಅಜೇರು, ಅರ್ಥದಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ್ ಭಟ್ ಬೊಳಂತಿಮೊಗರು, ಶ್ಯಾಮ್ ಭಟ್ ಪಕ್ಕಳಕುಂಜ, ಅವಿನಾಶ್ ಶೆಟ್ಟಿ ಉಬರಡ್ಕ ಇವರು ಪಾಲ್ಗೊಂಡಿದ್ದರು. ತುಳು-ಕನ್ನಡಿಗರು, ಕಲಾಭಿಮಾ ನಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ