ಅಜೆಕಾರು: ಮಂಗಳವಾರ ಸಂಜೆ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ ಮರ್ಣೆ, ಕಡ್ತಲ, ವರಂಗ, ಹಿರ್ಗಾನ, ಬೈಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕೃಷಿ, ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
ರಸ್ತೆಗಳ ಮೇಲೆ ಮರಗಳು ಉರುಳಿ ಸಂಚಾರ ಸ್ಥಗಿತಗೊಂಡರೆ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು.
ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಟ್ಟಡಕ್ಕೆ ಹಾನಿಯಾಗಿ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ. ಮುನಿಯಾಲು, ಎಳ್ಳಾರೆ ಭಾಗದಲ್ಲಿ ಅಡಿಕೆ ಮರಗಳು ಗಾಳಿಗೆ ಉರುಳಿ ಬಿದ್ದು ಕೃಷಿಗೆ ಹಾನಿ ಉಂಟಾಗಿದೆ.
ಕಡ್ತಲ ಗ್ರಾ.ಪಂ. ವ್ಯಾಪ್ತಿಯ ಎಳ್ಳಾರೆ, ಪಾಲ್ಜಡ್ಡು, ಕುಕ್ಕುಜೆ, ದೊಂಡೇರಂಗಡಿ, ವರಂಗ ಪಂಚಾಯತ್ ವ್ಯಾಪ್ತಿಯ ಮುನಿಯಾಲು, ಚಟ್ಕಲ್‌ಪಾದೆ, ಮಾತಿ ಬೆಟ್ಟು, ಮರ್ಣೆ ಗ್ರಾ.ಪಂ. ವ್ಯಾಪ್ತಿಯ ದೆಪ್ಪುತ್ತೆ, ಹಿರ್ಗಾನ ಪಂಚಾಯತ್ ವ್ಯಾಪ್ತಿಯ ಚಿಕ್ಕಲ್‌ಬೆಟ್ಟು ಪ್ರದೇಶಗಳ ಬಹುತೇಕ ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ವಿದ್ಯುತ್ ಸಂಪರ್ಕ ಕಡಿತಗೊಂಡಿರು ವುದರಿಂದ ಮೆಸ್ಕಾಂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.