Advertisement

Ajekar Case Follow Up: ಜೂನ್‌ನಲ್ಲೇ ವಿಷ ಪದಾರ್ಥ ಖರೀದಿಸಿದ್ದ ದಿಲೀಪ್‌

12:55 AM Oct 29, 2024 | Team Udayavani |

ಉಡುಪಿ/ಕಾರ್ಕಳ/ಅಜೆಕಾರು: ಅಜೆಕಾರು ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಿಲೀಪ್‌ ಹೆಗ್ಡೆಯು ವಿಷ ಪದಾರ್ಥವನ್ನು ಜೂನ್‌ನಲ್ಲೇ ಉಡುಪಿಯ ಒಳಕಾಡಿನ ರಾಮನ್ಸ್‌ ಲ್ಯಾಬ್‌ನಲ್ಲಿ ಖರೀದಿಸಿದ್ದ ಸಂಗತಿ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

5 ತಿಂಗಳ ಹಿಂದೆಯೇ ಸಂಚು
ತಾನು ವೈದ್ಯಕೀಯ ವಿದ್ಯಾರ್ಥಿ. ತನ್ನ ಲ್ಯಾಬ್‌ನ ಬಳಕೆಗೆ ಬೇಕೆಂದು ಲ್ಯಾಬ್‌ನವರನ್ನು ನಂಬಿಸಿದ್ದ ಆತ “ಆರ್ಸೆನಿಕ್‌ ಟ್ರೈ ಆಕ್ಸೆ„ಡ್‌’ ಖರೀದಿಸಿದ್ದ. ಈ ಮೂಲಕ ಬಾಲಕೃಷ್ಣ ಅವರ ಕೊಲೆಗೆ ಆರೋಪಿಗಳು 5 ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು ಎನ್ನಲಾಗಿದೆ.

ಲ್ಯಾಬ್‌ ಮಾಲಕರ ವಿಚಾರಣೆ
ರಾಮನ್ಸ್‌ ಲ್ಯಾಬ್‌ನ ಮಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಲ್ಯಾಬ್‌ ಮಾಲಕರು ಮಾಹಿತಿ ನೀಡಿದ್ದು, ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಒಳಪಡಿಸುವುದಾಗಿ ಎಸ್‌ಪಿ ಡಾ| ಕೆ. ಅರುಣ್‌ ತಿಳಿಸಿದ್ದಾರೆ.

ಸೈಲೆಂಟ್‌ ಕಿಲ್ಲರ್‌ ಆದನೇ?
ಮುಂಬಯಿಯಲ್ಲಿ ಬೆಳೆದು ಶಿಕ್ಷಣ ಪಡೆದಿದ್ದ ಆರೋಪಿ ದಿಲೀಪ್‌ ಹೆಗ್ಡೆ ಸಾಮಾಜಿಕವಾಗಿ ಬೆರೆತವನಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎನ್ನುವಂತಿದ್ದವ. ಬಿ.ಕಾಂ. ಪದವಿ ಪಡೆದಿದ್ದ. ಕೆಲವು ವರ್ಷಗಳ ಹಿಂದೆ ಕಾರ್ಕಳದಲ್ಲಿ ಆತನ ಕುಟುಂಬ ಹೊಸ ಉದ್ದಿಮೆ ಆರಂಭಿಸಿದಾಗ ಊರಿಗೆ ಮರಳಿ ಬಂದು ಉದ್ಯಮದಲ್ಲಿ ತೊಡಗಿಕೊಂಡಿದ್ದ. ಜನ ಸಂಪರ್ಕವೂ ಕಡಿಮೆ. ಇಂಥವನು ಕಿಲ್ಲರ್‌ ಯಾಕಾದ ಎಂಬ ಪ್ರಶ್ನೆ ಜನರಲ್ಲಿ ಎದುರಾಗಿದೆ.

ಗೂಗಲ್‌ ಸರ್ಚ್‌ ಮಾಡಿ ಕೆಮಿಸ್ಟ್ರಿ ಅಧ್ಯಯನ?
ಆರ್ಸೆನಿಕ್‌ ಟ್ರೈ ಆಕ್ಸೆ„ಡ್‌ ಬಗ್ಗೆ ಆರೋಪಿ ಮಾಹಿತಿ ಪಡೆದದ್ದು ಗೂಗಲ್‌ ಸರ್ಚ್‌ನಿಂದಲೇ. ಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನೆಮಾ ಅಥವಾ
ಗೆಳೆಯರ ಮೂಲಕ ಈ ವಿಷ ಪದಾರ್ಥದ ಮಾಹಿತಿ ಸಿಕ್ಕಿರಬಹುದೇ ಎನ್ನುವ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸಿದ್ದಾರೆ. ಒಬ್ಬ ವ್ಯಕ್ತಿಯ ಕೊಲೆ ಮಾಡಲು ಕೆಮಿಸ್ಟ್ರಿ ಹೇಗೆ ಸಹಕಾರಿಯಾಗಬಲ್ಲದು ಎಂಬುದರ ಬಗ್ಗೆ ಗೂಗಲ್‌ನಲ್ಲಿ ಸುದೀರ್ಘ‌ ಅಧ್ಯಯನ ಮಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Advertisement

ವಿಜ್ಞಾನದ ಬಗ್ಗೆ ತಿಳಿಯದಿದ್ದರೂ, ಕೆಮಿಸ್ಟ್ರಿ ವಿಷಯದ ಬಗ್ಗೆ ಮಾಹಿತಿ ಪಡೆದದ್ದು ಅಚ್ಚರಿಗೆ ಕಾರಣವಾಗಿದೆ. ಸ್ಲೋ ಪಾಯ್ಸನ್‌ ರೀತಿ ಬಗ್ಗೆ ವ್ಯವಸ್ಥಿತ ಅಧ್ಯಯನ ನಡೆಸಿ ಕೊಲೆಯ ಸಂಚನ್ನು ಹೂಡಲಾಗಿತ್ತು. ಗೂಗಲ್‌ ಸರ್ಚ್‌ನ ಪ್ರಶ್ನೋತ್ತರ ವಿಭಾಗದಲ್ಲಿ ಆರ್ಸೆನಿಕ್‌ ಟ್ರೈ ಆಕ್ಸೆ„ಡ್‌ ಅಂಶವು ಮನುಷ್ಯನ ದೇಹದ ಒಳಗೆ ಸೇರಿದಲ್ಲಿ ಮನುಷ್ಯನು ಅನಾರೋಗ್ಯಕ್ಕೆ ಒಳ ಪಟ್ಟು ಎಷ್ಟು ದಿನದಲ್ಲಿ ಸಾಯುತ್ತಾನೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಆರೋಪಿಯೂ ಸಹ ಇದೇ ಮಾರ್ಗವನ್ನು ಆನುಸರಿಸಿರುವ ಸಾಧ್ಯತೆ ಇದೆ.

ದಿಲೀಪನಿಗೆ ನ್ಯಾಯಾಂಗ ಬಂಧನ
ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ಸೋಮವಾರ ಕಾರ್ಕಳ ತಾಲೂಕು ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದು, ಸೀನಿಯರ್‌ ಸಿವಿಲ್‌ ಜಡ್ಜ್ ನ. 7ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಮುಖ ಆರೋಪಿ ಪ್ರತಿಮಾಳಿಗೆ ಈಗಾಗಲೇ ನ. 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿಆರ್‌. ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಕರೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next