Advertisement

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ; ಶೋಡಷ ಉತ್ಸವಕ್ಕೆ ಚಾಲನೆ

12:31 PM Aug 22, 2017 | Team Udayavani |

ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಶೋಡಷ ಉತ್ಸವದ ಹರ್ಷ ಮಾನಿಷಾದ ಯಕ್ಷಗಾನ ಬಯಲಾಟ, ತಾಳಮದ್ದಳೆಯ ಸಮಾರೋಪ ಕೂಟ ಹಾಗೂ ಯಕ್ಷರಕ್ಷಾ ಪ್ರಶಸ್ತಿ-ಪುರಸ್ಕಾರ ಪೇಟ, ತ್ರಿವಳಿ ಸಂಭ್ರಮದ ನೋಟ ಸಂಭ್ರಮಕ್ಕೆ ಆ. 20ರಂದು ಮಧ್ಯಾಹ್ನ  ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಚಾಲನೆ ನೀಡಲಾಯಿತು.

Advertisement

ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕಾಲದಲ್ಲಿ ಯಕ್ಷಗಾನವು ಮುಂಬಯಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಮಾಯಾನಗರಿಯಲ್ಲಿ ಯಕ್ಷಗಾನದ ಕ್ರಾಂತಿಯಾಗುತ್ತಿದೆ. ಮುಂಬಯಿಯ ದಾನಿಗಳು, ಕಲಾಭಿಮಾನಿಗಳು ಉತ್ತಮ ರೀತಿಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿದ್ದಾರೆ.  

ಯಕ್ಷಗಾನವು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದರೂ ಕೂಡ ಇದರಲ್ಲಿ ಧಾರ್ಮಿಕತೆ ಅಡಗಿದೆ. ಯಕ್ಷಗಾನದಿಂದ ನೋಡುಗರಲ್ಲಿ ಭಕ್ತಿಭಾವ ಮೂಡುತ್ತದೆ. ಅಜೆಕಾರು ಕಲಾಭಿಮಾನಿ ಬಳಗದ ಬಾಲಕೃಷ್ಣ ಶೆಟ್ಟಿ ಅವರು ಕಳೆದ ಹದಿನಾರು ವರ್ಷಗಳಿಂದ ಊರಿನ ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಿ ತಾಳಮದ್ದಳೆ, ಯಕ್ಷಗಾನವನ್ನು ಪ್ರದರ್ಶಿಸುವುದರ ಜೊತೆಗೆ ಅಶಕ್ತ ಕಲಾವಿದರಿಗೆ ನೆರವು, ಸಾಧಕರಿಗೆ ಬೃಹತ್‌ ನಿಧಿಯೊಂದಿಗೆ ಪ್ರಶಸ್ತಿ ಪ್ರದಾನ ಇತ್ಯಾದಿಗಳನ್ನು ನೆರವೇರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮುಂಬಯಿಯಲ್ಲಿ ಬಾಲಕೃಷ್ಣ ಶೆಟ್ಟಿ ಅವರು ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದ್ದಾರೆ. ಕಲೆಯ ಬೆಳವಣಿಗೆಗೆ ಬಳಗದ ಕೊಡುಗೆ ಅಪಾರವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳು, ದಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಬಾಲಕೃಷ್ಣರ ಸಾಧನೆ ಅಪಾರ – ಲತಾ ಪಿ. ಶೆಟ್ಟಿ
ಮುಖ್ಯ ಅತಿಥಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪಿ. ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ರಂಗದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಾಧನೆ ಅಪಾರವಾಗಿದೆ ಎಂದು ನುಡಿದರು.

ಕಲಾಭಿಮಾನಿಗಳ ಪ್ರೋತ್ಸಾಹ ಅನನ್ಯ – ಎಲಿಯಾಳ ಉದಯ ಹೆಗ್ಡೆ
ಅತಿಥಿಯಾಗಿ ಪಾಲ್ಗೊಂಡ ಮೀರಾ-ಭಾಯಂದರ್‌ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಉದಯ್‌ ಹೆಗ್ಡೆ ಎಲಿಯಾಳ ಅವರು ಮಾತನಾಡಿ, ಯಕ್ಷಗಾನದ ಮೇಲಿನ ಪ್ರೀತಿಯಿಂದ ಮಳೆಯನ್ನು ಲೆಕ್ಕಿಸದೆ ಕಲಾಭಿಮಾನಿಗಳು ಇಲ್ಲಿ ತುಂಬಿರುವುದು ಅಭಿಮಾನದ ಸಂಗತಿಯಾಗಿದೆ. ಯಕ್ಷಗಾನವನ್ನು ಮುಂಬಯಿಯಲ್ಲಿ ಕಂಗೊಳಿಸುವಂತೆ ಮಾಡಿದ ಯಶಸ್ಸು ಅಜೆಕಾರು ಬಳಗಕ್ಕೆ ಸಲ್ಲುತ್ತದೆ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ,  ಸೈಂಟ್‌ ಆ್ಯಗ್ನೇಸ್‌ ಇಂಗ್ಲಿಷ್‌ ಹೈಸ್ಕೂಲ್‌ನ ಅರುಣೋದಯ ಎಸ್‌. ರೈ ಬಿಳಿಯೂರುಗುತ್ತು, ಭಾಂಡೂಪ್‌ ಪ್ರಿಯೇಶ್‌ ಇಂಡಸ್ಟಿÅàಸ್‌ನ ಶಂಕರ್‌ ಶೆಟ್ಟಿ ಮುಲುಂಡ್‌, ಸಂತೋಷ್‌ ಕ್ಯಾಟರರ್ನ ರಾಘು ಪಿ. ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ಸಂಸ್ಥಾಪಕಾಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಗೌರವ ಕಾರ್ಯದರ್ಶಿ ಸುಧಾಕರ ಶೆಟ್ಟಿ ಎಣ್ಣೆಹೊಳೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ರಂಗನಟ ಅಶೋಕ್‌ ಪಕ್ಕಳ ಮತ್ತು ಸಂಘಟಕ ಕರ್ನೂರು ಮೋಹನ್‌ ರೈ ಅವರು ಕಾರ್ಯಕ್ರಮ ನಿರ್ವಹಿಸಿ, ಅತಿಥಿಗಳನ್ನು ಪರಿಚಯಿಸಿ ವಂದಿಸಿದರು. ಅತಿಥಿ-ಗಣ್ಯರುಗಳನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಬಳಗದ ಪದಾಧಿಕಾರಿಗಳು, ಕಾರ್ಯಕರ್ತರು ಗೌರವಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮವಾಗಿ, ಕಾರ್ಯಕ್ರಮದ ಪ್ರಾರಂಭದಲ್ಲಿ  ನಗರದ ಪ್ರಸಿದ್ಧ ಕಲಾತಂಡಗಳಿಂದ ನೃತ್ಯ ವೈವಿಧ್ಯ ನಡೆಯಿತು. ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮಾನಿಷಾದ ಯಕ್ಷಗಾನ ಪ್ರದರ್ಶನಗೊಂಡಿತು.

ಅಜೆಕಾರು ಬಳಗ ನಮ್ಮೆಲ್ಲರ ಹೆಮ್ಮೆ 
ಮುಂಬಯಿ ಕಲಾರಸಿಕರಿಗೆ ಯಕ್ಷಗಾನವನ್ನು ಕಳೆದ 16 ವರ್ಷಗಳಿಂದ ಕಲೆಯ ಸವಿರುಚಿಯನ್ನು ಅಜೆಕಾರು ಕಲಾಭಿಮಾನಿ ಬಳಗ ಉಣಬಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯಕ್ಷಗಾನವನ್ನು ನಿರಂತರವಾಗಿ ಉಳಿಸಿ-ಬೆಳೆಸಿದ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರಿಗೆ ಸಲ್ಲುತ್ತದೆ. ಅವರ ಈ ಕಲಾ ಸೇವೆ ನಿಂತ ನೀರಾಗದೆ ಹರಿಯುವ ನದಿಯಾಗಲಿ. 
 ಐಕಳ ಗುಣಪಾಲ್‌ ಶೆಟ್ಟಿ, ಅಂಧೇರಿ-ಬಾಂದ್ರಾ 
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ

ಬಳಗದ ಕಲಾಸೇವೆ ಸ್ತುತ್ಯರ್ಹ
 ಮುಂಬಯಿ ಮಹಾನಗರದಲ್ಲಿ ತಾಳಮದ್ದಳೆಗೆ ಜೀವ ತುಂಬಿದವರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಎಂದರೆ ತಪ್ಪಾಗಲಾರದು. ನಿರಂತರವಾಗಿ ಸರಣಿ ತಾಳಮದ್ದಳೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಊರಿನ ಪ್ರತಿಭಾವಂತ ಕಲಾವಿದರಿಗೆ ಇಲ್ಲಿ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವ ಅವರ ಕಲಾ ಸೇವೆ ಸ್ತುತ್ಯರ್ಹ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಮಾತ್ರ ಕಲೆ, ಕಲಾವಿದರ ಉಳಿವು ಸಾಧ್ಯವಾಗುತ್ತದೆ. ಅವರ ಕಲಾಸೇವೆಗೆ ನಾವೆಲ್ಲರೂ ಸಹಕರಿಸೋಣ ಎಂದರು.
 ಡಾ| ಭಾಸ್ಕರ ಶೆಟ್ಟಿ ದೀಪಕ್‌ ಆಸ್ಪತ್ರೆ ಮೀರಾರೋಡ್‌ 

Advertisement

Udayavani is now on Telegram. Click here to join our channel and stay updated with the latest news.

Next