ಕೆಲವು ನಾಯಕ ನಟರಿಗೆ ಯಾವುದಾದರೊಂದು ಟೈಟಲ್ ಚೆನ್ನಾಗಿ ಹೊಂದಿಕೆಯಾಗುತ್ತದೆ. ಆ ಟೈಟಲ್ನಡಿ ಮಾಡಿದ ಸಿನಿಮಾಗಳು ಕೂಡಾ ಹಿಟ್ ಆಗುತ್ತವೆ. ಆ ತರಹದ ಹೀರೋಗಳ ಸಾಲಿಗೆ ಅಜೇಯ್ ರಾವ್ ಕೂಡಾ ಸೇರುತ್ತಾರೆ. ಅಜೇಯ್ ರಾವ್‌ಗೆ ‘ಕೃಷ್ಣ’ ಟೈಟಲ್ ತುಂಬಾ ಚೆನ್ನಾಗಿ ಆಗಿಬರುತ್ತದೆ ಎಂದರೆ ತಪ್ಪಿಲ್ಲ. ಅದಕ್ಕೆ ಪೂರಕವಾಗಿ ಆ ಟೈಟಲ್ನಡಿ ಮಾಡಿದ ಸಿನಿಮಾಗಳು ಕೂಡಾ ಯಶಸ್ಸು ಕಂಡಿವೆ. ಈಗ ಯಾಕೆ ಈ ವಿಚಾರ ಎಂದು ನೀವು ಕೇಳಬಹುದು. ಅಜೇಯ್ ರಾವ್ ಅವರು ಕೃಷ್ಣ ಹೆಸರಿನ ಅಕ್ಕಪಕ್ಕದಲ್ಲೇ ಮತ್ತೂಂದು ಸಿನಿಮಾ ಒಪ್ಪಿಕೊಂಡಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮುಗಿದಿದೆ. ಅದು ‘ಕೃಷ್ಣ ಟಾಕೀಸ್’. ಇದು ಅಜೇಯ್ ಅವರ ಹೊಸ ಸಿನಿಮಾ. ಈಗಾಗಲೇ ಅಜೇಯ್ ‘ಕೃಷ್ಣನ್ ಲವ್‌ಸ್ಟೋರಿ’, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’, ‘ಕೃಷ್ಣ ರುಕ್ಕು’, ‘ಕೃಷ್ಣ ಲೀಲಾ’ ಚಿತ್ರಗಳನ್ನು ಮಾಡಿದ್ದು, ಈಗ ‘ಕೃಷ್ಣ ಟಾಕೀಸ್’ ಮಾಡುತ್ತಿದ್ದಾರೆ. ಇದು ಕೃಷ್ಣ ಸೀರಿಸ್‌ನಲ್ಲಿ ಬರುತ್ತಿರುವ ಐದನೇ ಚಿತ್ರ ಎಂಬುದು ಮತ್ತೂಂದು ವಿಶೇಷ.
ವಿಜಯಾನಂದ್ ಈ ಚಿತ್ರದ ನಿರ್ದೇಶಕರು. ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಆನಂದಪ್ರಿಯ ಎಂಬ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ ಅವರು ಈಗ ತಮ್ಮ ಹೆಸರನ್ನು ವಿಜಯಾನಂದ್ ಎಂದು ಬದಲಿಸಿಕೊಂಡಿದ್ದಾರೆ. ಗೋವಿಂದ ರಾಜ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಸಿಂಧು ಲೋಕನಾಥ್ ಹಾಗೂ ಅಪೂರ್ವ ನಾಯಕಿಯರಾಗಿ ನಟಿಸಿದ್ದಾರೆ. ನಿರ್ದೇಶಕ ವಿಜಯಾನಂದ್ ಚಿತ್ರದ ಕಥೆ ಬಗ್ಗೆ ಹೆಚ್ಚೇನು ಹೇಳಲಿಲ್ಲ. ಅದಕ್ಕೆ ಕಾರಣ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಸುಮಾರು ವರ್ಷಗಳ ಹಿಂದೆ ಲಕ್ನೋದ ಚಿತ್ರಮಂದಿರವೊಂದರಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗಿದೆಯಂತೆ. ಚಿತ್ರ ಕ್ಷಣ ಕ್ಷಣವೂ ಕುತೂಹಲ ಹೆಚ್ಚಿಸುತ್ತಾ ಸಾಗಿ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ವಿಜಯಾನಂದ್ ಅವರಿಗಿದೆ. ನಿರ್ಮಾಪಕ ಗೋವಿಂದ ರಾಜ್ ಕಥೆ ಇಷ್ಟವಾಗಿ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು.
ಚಿತ್ರದ ಬಗ್ಗೆ ಮಾತನಾಡುವ ಅಜೇಯ್ ರಾವ್, ‘ನನಗಿದು ಹೊಸ ಪಾತ್ರ. ಕಥೆ ಕೇಳಿ ತುಂಬಾ ಇಷ್ಟವಾಯಿತು. ನಿರ್ದೇಶಕರಿಗೆ ಬೇಜಾರಾಗಿರಬಹುದು, ಕಥೆ ಕೇಳಿದ ನಂತರ ಇದು ನೀವೇ ಮಾಡಿದ ಕಥೆನಾ ಎಂದು ಕೇಳಿದೆ. ಅಷ್ಟೊಂದು ನೀಟಾಗಿ ಕಥೆ ಮಾಡಿದ್ದಾರೆ. ನಾನಿಲ್ಲಿ ಪತ್ರಕರ್ತನಾಗಿ ನಟಿಸುತ್ತಿದ್ದು, ಚಿತ್ರಮಂದಿರವೊಂದರ ಸುತ್ತ ಕಥೆ ಸಾಗುತ್ತದೆ. ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳು ಹೆಚ್ಚಿವೆ’ ಎಂದು ಚಿತ್ರದ ಬಗ್ಗೆ ಹೇಳಿದರು. ಚಿತ್ರದಲ್ಲಿ ನಟಿಸಿರುವ ಸಿಂಧು ಲೋಕನಾಥ್ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯಾದರೂ ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಪಾತ್ರವಂತೆ. ಇವರ ಪಾತ್ರದ ಮೂಲಕ ಒಂದು ಸಂದೇಶವನ್ನು ಹೇಳಲಾಗುತ್ತಿದೆಯಂತೆ. ಚಿತ್ರದ ಮತ್ತೂಬ್ಬ ನಾಯಕಿ ಆಪೂರ್ವ ಇಲ್ಲಿ ಸಿಟಿ ಹುಡುಗಿಯಾಗಿ ನಟಿಸಿದ್ದಾರೆ. ಅವರು ಕೂಡಾ ತಮ್ಮ ಪಾತ್ರ, ತಂಡದ ಬಗ್ಗೆ ಮಾತನಾಡಿದರು. ಈ ಹಿಂದೆ ‘ಲೈಫ್ ಸೂಪರ್’, ‘ಕಾರ್ನಿ’ ಚಿತ್ರಗಳಲ್ಲಿ ಹೀರೋ ಆಗಿದ್ದ ನಿರಂತ್ ಇಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತವಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಭಿನ್ನವಾಗಿರಲಿದೆ ಎಂದರು. ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ವಿಕ್ರಮ್ ಮೋರ್ ಸಾಹಸ ಸಂಯೋಜನೆ ಇದೆ.