ಕಲಬುರಗಿ: ಕೋವಿಡ್-19 ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವೈದ್ಯರಿಗೆ ಪಿಪಿಇ ಕಿಟ್ ಮತ್ತು ಮಾಸ್ಕ್ ಸರಿಯಾಗಿ ಸಿಗುತ್ತಿಲ್ಲ. ಕ್ವಾರಂಟೈನ್ ನಲ್ಲಿರುವವರಿಗೆ ಸೌಲಭ್ಯಗಳು ನೀಡುತ್ತಿಲ್ಲ. ಕುಡಿಯಲು ನೀರಿಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್ ಮತ್ತು ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಪ್ರತಿ 19 ಗಂಟೆಗೆ ಓರ್ವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಪೈಕಿ ಹೆಚ್ಚಿನವರು ಕಲಬುರಗಿ ಜಿಲ್ಲೆಯವರು. ಆದರೂ, ಲ್ಯಾಬ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.
ಪ್ರತಿ ಜಿಲ್ಲೆಗೆ ಲ್ಯಾಬ್ ತೆಗೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇಲ್ಲಿಯವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಲ್ಯಾಬ್ ಗಳ ತೆರೆಯುವ ಕೆಲಸ ಮಾಡಿಲ್ಲ. ಹೀಗಾಗಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರದ ಮಾದರಿಗಳನ್ನೂ ಕಲಬುರಗಿಯ ಒಂದೇ ಲ್ಯಾಬ್ ನಲ್ಲಿ ಪರೀಕ್ಷೆ ಮಾಡುವ ಪರಿಸ್ಥಿತಿ ಇದೆ. ಅದರಲ್ಲೂ ಲ್ಯಾಬ್ ಸಾಮರ್ಥ್ಯ ಕಡಿಮೆ ಇರುವುದರಿಂದ ಬೆಂಗಳೂರಿಗೆ ಮಾದರಿಗಳನ್ನು ರವಾನಿಸಲಾಗುತ್ತಿದೆ. ವರದಿ ಬರುವವರೆಗೆ ಶಂಕಿತರು ಇಲ್ಲಿ ಇರುತ್ತಾರೆ? ಎಷ್ಟು ಜನರ ಸಂಪರ್ಕಕ್ಕೆ ಬಂದಿರುತ್ತಾರೆ ಎಂಬ ಮಾಹಿತಿಯೂ ಸಿಗುತ್ತಿಲ್ಲ ಎಂದರು
ಕೋವಿಡ್-19 ಮಹಾಮಾರಿ ಯುದ್ಧ ಗೆಲ್ಲಬೇಕು ಅಂದರೆ ರಕ್ಷಕರಿಗೆ ಶ್ರೀರಕ್ಷಣೆ ಇಲ್ಲದಂತಾಗಿದೆ. ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್ ಇಲ್ಲಾ ಅಂತ ಸ್ವತಃ ವೈದ್ಯರು ಹೇಳುತ್ತಿದ್ದಾರೆ
ಕಳಪೆಯಾದ ಪಿಪಿಇ ಕಿಟ್ ನೀಡಿದ್ದಾರೆ ಎಂದು ಕಲಬುರಗಿ ಆರ್ ಸಿ ಅವರಿಗೆ ವೈದ್ಯರು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಕೋವಿಡ್-19 ವಾರ್ಡಿನಲ್ಲಿ ಸ್ಯಾನಿಟೈಸರ್ ಸಹ ನೀಡಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ವೈದ್ಯ ಸಿಬ್ಬಂದಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ನಾಲ್ವರು ಕೋವಿಡ್-19 ಸಚಿವರು: ರಾಜ್ಯ ಸರ್ಕಾರ ಪ್ರತಿ ಪಕ್ಷದವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಿಲ್ಲ. ರಾಜ್ಯದಲ್ಲಿ ನಾಲ್ಕು ಮಂದಿ ಕೋವಿಡ್ ಸಚಿವರಿದ್ದಾರೆ. ಸುರೇಶ್ ಕುಮಾರ್ ಬರ್ತಾರೆ ನ್ಯೂಸ್ ಬುಲೆಟಿನ್ ಓದಿ ಹೇಳುತ್ತಾರೆ. ಹಾಗೆ ನೋಡಿದರೆ ಸುರೇಶ್ ಕುಮಾರ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಇಲ್ಲ ಎಂದು ಕಿಡಿಕಾರಿದರು.
ಕಲಬುರಗಿ ಇಎಸ್‍ಐಗೆ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಒಂದು ರೂಪಾಯಿ ಅನುದಾನವನ್ನೂ ನೀಡಿಲ್ಲ. ಈ ಬಗ್ಗೆ ಸಂಸದ ಡಾ.ಉಮೇಶ್ ಜಾಧವ್ ಕೇಂದ್ರಕ್ಕೆ ಕೇಳುತ್ತಿಲ್ಲ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ವೈದ್ಯರಾಗಿ ಕೆಲಸ ಮಾಡುವುದು ಉತ್ತಮ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.