ಮುಂಬಯಿ: ಅಜಯ್ ದೇವಗನ್ ಸಿನಿ ಕೆರಿಯರ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಮೈದಾನ್ʼ ಕೊನೆಗೂ ರಿಲೀಸ್ ಆಗುವ ಹಂತಕ್ಕೆ ಬಂದಿದ್ದು, ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಅಜಯ್ ದೇವಗನ್ ಅಭಿನಯದ ‘ಮೈದಾನ್’ ಸಿನಿಮಾ ನಾಲ್ಕು ವರ್ಷಗಳಿಂದ ರಿಲೀಸ್ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರ ರಿಲೀಸ್ ಡೇಟ್ ಮುಂದೂಡಿಕೆಯಾಗಿತ್ತು.
ಇದಾದ ಬಳಿಕ 2022 ರಲ್ಲಿ ಅಜಯ್ ದೇವಗನ್ ʼಮೈದಾನ್ʼ ಸಿನಿಮಾ 2023 ರ ಫೆಬ್ರವರಿ 17 ರಂದು ರಿಲೀಸ್ ಆಗಲಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ಮತ್ತೆ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿತ್ತು.
ʼಮೈದಾನ್ʼ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆದ ವೇಳೆ ಮತ್ತೊಂದು ಸಿನಿಮಾ ಕೂಡ ರಿಲೀಸ್ ಆಗುವುದಿತ್ತು. ಪ್ರತಿ ಬಾರಿಯೂ ಬಾಕ್ಸ್ ಆಫೀಸ್ ದಂಗಲ್ ತಪ್ಪಿಸಲು ಹೋಗಿ ಸಿನಿಮಾ ರಿಲೀಸ್ ಆಗಲು ಇಷ್ಟು ತಡವಾಗುತ್ತಿತ್ತು ಎನ್ನುವುದು ಸಿನಿವಲಯದಲ್ಲಿ ಕೇಳಿ ಬಂದ ಮಾತು.
ಇದೀಗ ʼಮೈದಾನ್ʼ ಸಿನಿಮಾದ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದೇ ವರ್ಷದ ಏಪ್ರಿಲ್ ನಲ್ಲಿ ಬರುವ ಈದ್ ಹಬ್ಬದ ಸಂದರ್ಭದಲ್ಲಿ ʼಮೈದಾನ್ʼ ರಿಲೀಸ್ ಆಗಲಿದೆ ಎಂದು ಫಿಲ್ಮ್ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ʼಮೈದಾನ್ʼ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಅಮಿತ್ ಶರ್ಮಾ ನಿರ್ದೇಶನದ ʼಮೈದಾನ್ʼ ಭಾರತದ ಫುಟ್ ಬಾಲ್ ದಿಗ್ಗಜ ಸೈಯದ್ ಅಬ್ದುಲ್ ರಹೀಮ್ ಅವರ ಕಥೆ ಹಾಗೂ 1952 ರಿಂದ 1962 ಭಾರತದ ಫುಟ್ ಬಾಲ್ ತಂಡ ಸಾಗಿ ಬಂದ ಸಾಧನೆಯ ಹಾದಿಯ ಕಥೆಯನ್ನು ಒಳಗೊಂಡಿದೆ.
ಈ ಬಾರಿಯೂ ʼಮೈದಾನ್ʼ ಸಿನಿಮಾದೊಂದಿಗೆ ಬಹು ನಿರೀಕ್ಷಿತ ಸಿನಿಮಾವಾಗಿರುವ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅವರ ‘ಬಡೆ ಮಿಯಾನ್ ಛೋಟೆ ಮಿಯಾನ್ʼ ಸಿನಿಮಾದೊಂದಿಗೆ ತೆರೆ ಕಾಣಲಿದೆ.