Advertisement

Mangaluru; ಅಜಾತಶತ್ರು, ಅಪರೂಪದ ಸಾಧಕ ಮನೋಹರ ಪ್ರಸಾದ್‌

01:30 AM Mar 14, 2024 | Team Udayavani |

ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ “ಉದಯವಾಣಿ’ಯ ವಿಶ್ರಾಂತ ಸಹಾಯಕ ಸಂಪಾದಕ, ವಾಗ್ಮಿ, ಸಾಧಕ ಮನೋಹರ ಪ್ರಸಾದ್‌ ಅವರಿಗೆ ನುಡಿ ನಮನ ಕಾರ್ಯಕ್ರಮ ಮಂಗಳೂರಿನ ಸಂಘನಿಕೇತನದಲ್ಲಿ ಬುಧವಾರ ನೆರವೇರಿತು.

Advertisement

ವಿವಿಧ ಕ್ಷೇತ್ರದ ಗಣ್ಯರು ಕಾರ್ಯ ಕ್ರಮದಲ್ಲಿ ಭಾಗವಹಿಸಿ, ಮನೋಹರ ಪ್ರಸಾದ್‌ ಅವರಿಗೆ ಗೌರವ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಉದ್ಯಮಿ ಶ್ರೀನಾಥ್‌ ಹೆಬ್ಟಾರ್‌ ಸಹಿತ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಖ್ಯಾತ ವೈದ್ಯ ಡಾ| ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಬುದ್ಧಿಜೀವಿಯಾಗಿ, ಮೇಧಾವಿ ಹಾಗೂ ಅಜಾತಶತ್ರುವಾಗಿ ಮಾಧ್ಯಮ ರಂಗದಲ್ಲಿ ಸಾಧನೆ ಮಾಡಿದ ಮನೋಹರ ಪ್ರಸಾದ್‌ ನೆನಪು ಶಾಶ್ವತವಾಗಿರುತ್ತದೆ. ಬರಹ ಹಾಗೂ ವಾಕ್ಚಾತುರ್ಯದ ಮೂಲಕ ದೊಡ್ಡ ಸಾಧನೆ ಮಾಡಿದವರು ಎಂದರು.

ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, ನಮ್ಮ ನಾಡಿನ ಪತ್ರಿಕೋದ್ಯಮದಲ್ಲಿ ಮನೋಹರ ಪ್ರಸಾದ್‌ ಅವರು ಎಂದೆಂದಿಗೂ ಸ್ಮರಣೀಯರು. ಉದಯವಾಣಿ ಮಣಿಪಾಲದ ಮೋಹನ್‌ದಾಸ್‌ ಪೈ, ಸತೀಶ್‌ ಪೈ ಅವರ ಬೆಂಬಲದ ಹಿನ್ನೆಲೆಯಲ್ಲಿ ಅವರು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಮನೋಹರ ಪ್ರಸಾದ್‌ ಅವರು ಉದಯವಾಣಿಯಲ್ಲಿ ಕುಗ್ರಾಮ ಗುರುತಿಸಿ ಸಹಿತ ವಿವಿಧ ಜನ ಪರ ವರದಿಗಳನ್ನು ಮಾಡಿದರು. ಅವರ ಸ್ಮರಣ ಶಕ್ತಿಯೇ ಅದ್ಭುತ ಸಂಪತ್ತು ಎಂದರು.

Advertisement

ಹಿರಿಯ ಸಾಹಿತಿ ಪ್ರೊ|ಬಿ.ಎ. ವಿವೇಕ ರೈ ತಮ್ಮೊಂದಿಗಿನ ಸಂಬಂಧವನ್ನು ನೆನಪಿಸಿಕೊಂಡು, ಮನುಷ್ಯ ಪ್ರೀತಿ ಬೆಳೆಸಿಕೊಂಡಿದ್ದ “ಎಂಪಿ’ ಅವರು ಅಧ್ಯಯನಶೀಲತೆಯ ಮೂಲಕವೇ ಹೆಸರು ಪಡೆದವರು. ಶುದ್ಧತೆ ಹಾಗೂ ಸಮಗ್ರತೆ ಹೊಂದಿದ್ದ ಅವರ ಬರಹಗಳು ಅಚ್ಚುಕಟ್ಟುತನ ಹೊಂದಿದ್ದವು ಎಂದರು.

ವೈದ್ಯ ಡಾ|ನರಸಿಂಹ ಪೈ ಅವರು ಮಾತನಾಡಿ, ಮನೋಹರ ಪ್ರಸಾದ್‌ ಕೇವಲ ಪತ್ರಕರ್ತ ಮಾತ್ರವಲ್ಲ. ಸರ್ವ ವಿಷಯಗಳಲ್ಲಿಯೂ ಪರಿಣತಿ ಹೊಂದಿದ್ದ ಶ್ರೇಷ್ಠ ವ್ಯಕ್ತಿ ಎಂದರು.

ಪತ್ರಕರ್ತ ಪಿ.ಬಿ. ಹರೀಶ್‌ ರೈ ಅವರು ಮಾತನಾಡಿ, ಕಿರಿಯರಿಗೆ ಸದಾ ಬರೆಯಲು ಪ್ರೋತ್ಸಾಹಿಸುತ್ತಿದ್ದ ಅವರು, ಕೊನೆಯವರೆಗೂ ವಿದ್ಯಾರ್ಥಿಯಾಗಿಯೇ ಇದ್ದರು. ಅವರದ್ದು ಪತ್ರಿಕೋದ್ಯಮದಲ್ಲಿ ಶಾಶ್ವತ ಹೆಸರು ಎಂದರು. ರಾಜೇಶ್‌ ಕೆ.ಸಿ. ಕಾರ್ಯಕ್ರಮ ನಿರ್ವಹಿಸಿದರು. ನೂರಾರು ಮಂದಿ ಸಾರ್ವಜನಿಕರು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಸ್ಫೂರ್ತಿಯ ಬದುಕು ಸದಾ ಹಸುರು


ಮನೋಹರ ಪ್ರಸಾದ್‌ ಅವರು ಉದಯವಾಣಿ ಕುಟುಂಬದ ಸದಸ್ಯರಾಗಿ 36 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಅದ್ಭುತ ಸ್ಮರಣ ಶಕ್ತಿ ಹೊಂದಿದ್ದ ಅವರು ಜನಪರ ಬರಹಗಳ ಮೂಲಕ ಗುರುತಿಸಿಕೊಂಡು ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ. ಕಿರಿಯರಿಗೆ ಮಾರ್ಗದರ್ಶಕರಾಗಿದ್ದ ಮನೋಹರ ಪ್ರಸಾದ್‌ ಈಗ ಇಲ್ಲವಾದರೂ ಅವರ ಸ್ಫೂರ್ತಿಯ ಬದುಕು ನಮ್ಮ ಜತೆಗೆ ಸದಾ ಹಸುರಾಗಿರುತ್ತದೆ ಎಂದು ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ಎಂಡಿ ಹಾಗೂ ಸಿಇಒ ವಿನೋದ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next