Advertisement

ಐವರ್ನಾಡು ಗ್ರಾಮ  ಸಭೆ: ದೇವಸ್ಥಾನ ರಸ್ತೆ ಮರುಡಾಮರೀಕರಣಕ್ಕೆ ಒತ್ತಾಯ

03:24 PM Mar 25, 2017 | Team Udayavani |

ಐವರ್ನಾಡು :  ಐವರ್ನಾಡು ಗ್ರಾ.ಪಂ.ನ 2016-17ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾ. ಪಂ. ಅಧ್ಯಕ್ಷೆ ರಾಜೀವಿ ಪರ್ಲಿಕಜೆ ಅವರ ಅಧ್ಯಕ್ಷತೆಯಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.  ಗಾಮೋದ್ಯೋಗ ಖಾತರಿ ಯೋಜನೆಯ  ಸಹಾಯಕ ನಿರ್ದೇಶಕರಾದ ಭವಾನಿಶಂಕರ್‌ ಅವರು ನೋಡಲ್‌ ಅಧಿಕಾರಿಯಾಗಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಯು.ಡಿ. ಶೇಖರ್‌ ಸ್ವಾಗತಿಸಿ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಮತ್ತು ಆದ ಕಾಮಗಾರಿಗಳ ವಿವರವನ್ನು ನೀಡಿದರು. ಪುರುಷೋತ್ತಮ ಅವರು ವಸತಿ ಯೋಜನೆಗಳಲ್ಲಿ    ಮಂಜೂರಾದ ಮನೆಗಳ ವಿವರವನ್ನು ನೀಡಿದರು.

Advertisement

ಮರುಡಾಮರೀಕರಣ ಮಾಡಿ
ಶಿವರಾಮ ನೆಕ್ರೆಪ್ಪಾಡಿ ಅವರು ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ  ರಸ್ತೆ ತೀರಾ ಹದಗೆಟ್ಟಿದೆ. ಇದನ್ನು ಕೂಡಲೇ ಮರುಡಾಮರೀಕರಣ ಮಾಡಬೇಕು ಎಂದು ಹೇಳಿದರು. ಇದಕ್ಕೆ ಗ್ರಾಮಸ್ಥ ರೆಲ್ಲರೂ ಧ್ವನಿಗೂಡಿಸಿದರು. ಸೊಸೈಟಿ ಉಪಾಧ್ಯಕ್ಷ ವಿಕ್ರಂ  ಪೈ ಅವರು ನಾವು ಇದರ ಬಗ್ಗೆ  ಜಿ.ಪಂ. ಸದಸ್ಯರಿಗೆ ಮನವಿ ನೀಡಿದ್ದೇವೆ. ಆದಷ್ಟು ಬೇಗ ಮರುಡಾಮರು ಕಾಮಗಾರಿ ಆಗಬೇಕು ಎಂದು ಹೇಳಿದರು. ಜಿ.ಪಂ. ಸದಸ್ಯೆ  ಪುಷ್ಪಾವತಿ ಬಾಳಿಲರವರು ಜಿ.ಪಂ. ನಿಂದ ದೊರಕುವ ಅನುದಾನ ತುಂಬಾ ಕಮ್ಮಿ. ಈ ರಸ್ತೆಗೆ ಬೇಡಿಕೆ ಇಟ್ಟು ಬೇಗ ಮರುಡಾಮರೀಕರಣ ಆಗುವಂತೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ಕೃಷ್ಣಪ್ಪಗೌಡ ನೆಕ್ರೆಪ್ಪಾಡಿ ಅವರು ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವ ಅನುದಾನದಿಂದ ಎಷ್ಟೆಷ್ಟು ಕೆಲಸ ಆಗಿದೆ ಎಂಬ ವಿವರ ಕೊಡಿ ಎಂದು ಪಿ.ಡಿ.ಒ. ಅವರಲ್ಲಿ ಕೇಳಿದರು. ಅದಕ್ಕೆ ಪಿ..ಡಿ.ಒ. ಅವರು ಕಾಮಗಾರಿಗಳ ಬಗ್ಗೆ ಇಂಜಿನಿಯರ್‌ ವಿವರ ನೀಡುತ್ತಾರೆ ಎಂದು ಹೇಳಿದರು.  ಪಾಲೆಪ್ಪಾಡಿ ಕುಡಿಯುವ ನೀರಿಗೆ 2 ಲಕ್ಷ ರೂ. ಮಂಜೂರಾಗಿದ್ದು ನೀರಿನ ಪೈಪನ್ನು ಹಳೆ ಪೈಪಿನ ಮೇಲೆ ಹಾಕಿದ್ದು ಯಾಕೆ? ಎಂದು ಜಯಪ್ರಕಾಶ್‌ ನೆಕ್ರೆಪ್ಪಾಡಿ ಕೇಳಿದರು. ಅದಕ್ಕೆ ಅಧ್ಯಕ್ಷರು ಈ ವಿಷಯ ನನ್ನ ಗಮನಕ್ಕೆ  ಬಂದ ಕೂಡಲೇ ನಾನು ಆ ರೀತಿ ಪೈಪು ಅಳವಡಿಸಬಾರದು. ಕೆಲಸ ನಿಲ್ಲಿಸಿ ಎಂದು ಹೇಳಿರುವುದಾಗಿ ತಿಳಿಸಿದರು. ಆಗ ಜಯಪ್ರಕಾಶ್‌ ಹಾಗಾದರೆ ಈಗ ಅಲ್ಲಿ ಪೈಪ್‌ ಹಾಕಿದ್ದಾರೆ ಅದು ಯಾಕೆ? ಸಾರ್ವಜನಿಕವಾಗಿ ಕೆಲಸ ಮಾಡುವಾಗ ಸ್ವಲ್ಪ ಯೋಚಿಸಿ ನಷ್ಟ ಆಗದಂತೆ ಕೆಲಸ ಮಾಡಬೇಕು. ಹಳೆಯ ಪೈಪ್‌ನ ಮೇಲೆ ಹೊಸ ಪೈಪು ಹಾಕಿದರೆ ಹಳೆ ಪೈಪ್‌ ಆಕಸ್ಮಿಕವಾಗಿ ಒಡೆದರೆ ಹೊಸ ಪೈಪನ್ನು  ಕೂಡಾ ತೆಗೆಯಬೇಕು ಇದರಿಂದ ಪೈಪ್‌ಲೈನ್‌ ಹಾಳಾಗುತ್ತದೆ. ಜತೆಗೆ ಪಂಚಾಯತ್‌ಗೆ ತುಂಬಾ ನಷ್ಟವಾಗುತ್ತದೆ ಎಂದು ಹೇಳಿದರು.
ಆಗ ಇಂಜಿನಿಯರ್‌ ಹುಕ್ಕೇರಿಯವರು  ಅಲ್ಲಿ ಪೈಪ್‌ ಹಾಕಲು ಜಾಗ ಇಲ್ಲ. ನಾನು ಸ್ವಲ್ಪ ಎಡೆjಸ್ಟ್‌  ಮಾಡಿ ಹಾಕಿ ಎಂದು ಹೇಳಿದ್ದೆ ಎಂದು ಹೇಳಿದರು. ಅದಕ್ಕೆ ಹೇಗೆ ಎಡೆjಸ್ಟ್‌ ಮಾಡುವುದು ಅಲ್ಲಿ ಚರಂಡಿಯಲ್ಲಿಯೇ ಅಗೆದು ಹಾಕಬಹುದಲ್ಲ  ಎಂದು ಜಯಪ್ರಕಾಶ್‌ ಹೇಳಿದರು. ಆಗ ಕೃಷ್ಣಪ್ಪ ಗೌಡರು ಇಂಜಿನಿಯರ್‌  ಅವರು ಅಲ್ಲಿ ಬಂದು ನೋಡಿದ್ದೀರಾ ಎಂದು ಕೇಳಿದರು. ಅದಕ್ಕೆ ಹುಕ್ಕೇರಿಯವರು ನಾನು ಬಂದು ನೋಡಿಲ್ಲ  ಫೋನಲ್ಲಿ  ಹೇಳಿದ್ದು. ಈಗ ನಾನು ಬಂದು ನೋಡಿ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು. ಜಿ.ಪಂ ಮತ್ತು ತಾ.ಪಂ. ಅನುದಾನದಿಂದ ನಡೆದ ಕಾಮಗಾರಿಗಳ ವಿವರವನ್ನು ಹುಕ್ಕೇರಿಯವರು ನೀಡಿದರು.

ಶಿಕ್ಷಕರನ್ನು ನೇಮಿಸಿ
ಐವರ್ನಾಡು ಸ.ಹಿ.ಪ್ರಾ. ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ನಾಗಪ್ಪ ಪಾಲೆಪ್ಪಾಡಿಯವರು  ನಮ್ಮ ಶಾಲೆಯಲ್ಲಿ  ಎಲ್ಲಾ ಶಿಕ್ಷಕಿಯರೇ ಇರುವುದು. ಕನಿಷ್ಟ ಒಬ್ಬನಾದರೂ ಶಿಕ್ಷಕ ಬೇಕು.  ಒಳ್ಳೆಯ ಶಿಕ್ಷಣ ಕೊಡುವ ಶಿಕ್ಷಕಿಯನ್ನು ನಮ್ಮ ಶಾಲೆಯಿಂದ ಬೇರೆ ಶಾಲೆಗೆ ನಿಯೋಜನೆ ಮಾಡಿದ್ದಾರೆ. ಇದರಿಂದ ಶಾಲೆಗೆ ಸಮಸ್ಯೆಯಾಗುತ್ತದೆ. ಹಾಗೆ ಮಾಡಬಾರದು ಎಂದು ಹೇಳಿದರು. ಶಿಕ್ಷಣ ಇಲಾಖೆಯವರು ಇದಕ್ಕೆ ಉತ್ತರಿಸಿ ಅವರನ್ನು ತಾತ್ಕಾಲಿಕವಾಗಿ ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ಎರಡೂ ಸರಕಾರಿ ಶಾಲೆ ಆಗಿರುವಾಗ  ಕಷ್ಟ ಕಾಲದಲ್ಲಿ  ಸಹಕಾರ ನೀಡುವುದು ನಮ್ಮ ಧರ್ಮ. ಆ ಶಿಕ್ಷಕಿಯವರು ಸ್ವಲ್ಪ ದಿನದಲ್ಲಿ ನಿಮ್ಮ ಶಾಲೆಗೆ ಬರುತ್ತಾರೆ ಎಂದು ಉತ್ತರಿಸಿದರು. 

ಆರೋಗ್ಯ ಇಲಾಖೆಯ ಬಗ್ಗೆ ಹಲವು ಗ್ರಾಮ ಸಭೆಗಳಲ್ಲಿ ಪ್ರಸ್ತಾಪವಾದರೂ ಇಷ್ಟರವರೆಗೆ ಐವರ್ನಾಡಿನಲ್ಲಿ ಆರೋಗ್ಯ ಇಲಾಖೆ ಆಗಲಿಲ್ಲ ಎಂದು ಕೃಷ್ಣಪ್ಪಗೌಡರು ಹೇಳಿದರು. ತೋಟಗಾರಿಕೆ, ಮೆಸ್ಕಾಂ, ಶಿಕ್ಷಣ, ಆರೋಗ್ಯ, ಉದ್ಯೋಗ ಖಾತರಿ ಯೋಜನೆ, ಕಂದಾಯ, ಪಶುಸಂಗೋಪನೆ  ಇಲಾಖೆಗಳ ಅಧಿಕಾರಿಗಳು ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಜಿ.ಪಂ. ಸದಸ್ಯೆ  ಪುಷ್ಪಾವತಿ ಬಾಳಿಲ, ಬೆಳ್ಳಾರೆ ಪೊಲೀಸ್‌ ಠಾಣೆಯ ಎ.ಎಸ್‌.ಐ. ಮೋಹನ, ಗ್ರಾ.ಪಂ. ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ, ಸದಸ್ಯರಾದ ನವೀನ್‌ ಕುಮಾರ್‌ ಸಾರಕರೆ, ತಿರುಮಲೇಶ್ವರ ಪೂಜಾರಿಮನೆ, ಬಾಲಕೃಷ್ಣ ಕೀಲಾಡಿ, ಚಂದ್ರಲಿಂಗಂ ಎ.ಎಸ್‌., ದೇವಿಪ್ರಸಾದ್‌ ಕೊಪ್ಪತ್ತಡ್ಕ, ರಾಜೀವಿ ಉದ್ದಂಪಾಡಿ, ಚೈತ್ರಾ ಕಟ್ಟತ್ತಾರು,  ಭವಾನಿ ಬಾಂಜಿಕೋಡಿ, ರೇಖಾ ಉದ್ದಂಪಾಡಿ, ಸುಜಾತಾ ಪವಿತ್ರಮಜಲು, ಕೋಕಿಲವಾಣಿ, ಉಪಸ್ಥಿತರಿದ್ದರು. ಯು.ಡಿ. ಶೇಖರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next