ಕಡಬ: ಐತ್ತೂರು ಗ್ರಾಮದ ಬೆತ್ತೋಡಿ ತಮಿಳು ಕಾಲನಿಯ ಬಳಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ರಬ್ಬರ್ ತೋಟದೊಳಗೆ ಮರದ ರೆಂಬೆಯಲ್ಲಿ ನೇತುಹಾಕಿದ ರೀತಿಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಆಡಿನ ಕಳೇಬರವೊಂದು ಪತ್ತೆಯಾಗಿದ್ದು, ಚಿರತೆಯು ಆಡನ್ನು ಬೇಟೆಯಾಡಿ ಮರದ ಮೇಲೆ ಎಳೆದೊಯ್ದು ಸ್ವಲ್ಪ ಭಾಗ ತಿಂದು ಹಾಕಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
2 ತಿಂಗಳ ಹಿಂದೆ ಐತ್ತೂರು ಗ್ರಾ.ಪಂ. ವ್ಯಾಪ್ತಿಯ ಕಲ್ಲಾಜೆ ಅಂತಿಬೆಟ್ಟು ಪ್ರದೇಶದಲ್ಲಿ ಲಕ್ಷ್ಮಣ ಗೌಡ ಎಂಬವರಿಗೆ ಸೇರಿದ ದನ ಮತ್ತು ಕರುವಿನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು. ಕಳೆದ ಕೆಲವು ತಿಂಗಳಿನಿಂದ ಸುಮಾರು 20ಕ್ಕೂ ಹೆಚ್ಚು ದನಗಳ ಮೇಲೆ ಚಿರತೆ ದಾಳಿ ಮಾಡಿರುವುದಾಗಿ ಗ್ರಾಮದ ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಚಿರತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚಿರತೆ ಮತ್ತೆ ದಾಳಿ ಮಾಡಿದೆ. ಮನುಷ್ಯರ ಬಲಿ ಪಡೆದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂಬುದಾಗಿ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಕುರಿತು ಚಿತ್ರ ಸಹಿತ ಪ್ರಕಟಿಸಿ ಆಕ್ರೋಶ ಹೊರ ಹಾಕಿದ್ದಾರೆ. ಈ ಹಿಂದೆ ಇದೇ ಗ್ರಾಮದ ಕೋಕಳ ಎಂಬಲ್ಲಿ ರಾಘವ ಪೂಜಾರಿ ಎಂಬವರಿಗೆ ಸೇರಿದ ಆಡಿನ ಮೇಲೆ ಚಿರತೆಯೊಂದು ಏಕಾಏಕಿ ಪೊದೆಯಿಂದ ಹಾರಿ ದಾಳಿಮಾಡಿ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿತ್ತು.
ಆತಂಕದಲ್ಲಿ ರಬ್ಬರ್ ತೋಟಗಳ ಕಾರ್ಮಿಕರು
ಘಟನೆ ನಡೆದಿರುವ ಪ್ರದೇಶದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ)ಕ್ಕೆ ಸೇರಿದ ರಬ್ಬರ್ ತೋಟಗಳಿದ್ದು, ಬೆಳಗಿನ ಜಾವ ರಬ್ಬರ್ ಟ್ಯಾಪಿಂಗ್ ಮಾಡಲು ಬರುವ ಕಾರ್ಮಿಕರು ಜೀವ ಭಯದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದೆಡೆ ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಜನರು ಇನ್ನೊಂದೆಡೆ ಚಿರತೆ ದಾಳಿಯ ಸುದ್ದಿಯಿಂದ ಕಂಗಾಲಾಗಿದ್ದಾರೆ.