ಮಂಗಳೂರು: ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯಾ ರವಿವಾರ ಮಂಗಳೂರಿನ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ ಮುಂಬಯಿಗೆ ವಾಪಸಾದರು.
ಐಶ್ವರ್ಯಾ ಅವರ ತಂದೆ ಕೃಷ್ಣರಾಜ್ ರೈ ಅವರು ಇತ್ತೀಚೆಗೆ ಮುಂಬಯಿಯಲ್ಲಿ ನಿಧನ ಹೊಂದಿದ್ದು, ಅವರ ಪಿಂಡ ಪ್ರದಾನ ಕಾರ್ಯಾಕ್ರಮದಲ್ಲಿ ಭಾಗವಹಿಸಲು ಅವರು ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದರು.
ಉಪ್ಪಿನಂಗಡಿಯಲ್ಲಿ ಈ ಸಂಬಂಧ ವಿಧಿ ವಿಧಾನಗಳನ್ನು ನೆರವೇರಿಸಿ, ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದರು.
ರವಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಐಶ್ವರ್ಯಾ ರೈ, ಪುತ್ರಿ ಆರಾಧ್ಯಾ, ತಾಯಿ ಬೃಂದಾ ರೈ, ಸಹೋದರ ಆದಿತ್ಯ ರೈ ಜತೆಗೆ ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರದ ಕೆರೆಯ ಪಕ್ಕದಲ್ಲಿ ಕೃಷ್ಣರಾಜ್ ರೈ ಅವರ ಪಿಂಡ ಪ್ರದಾನ ಕಾರ್ಯಾಕ್ರಮದ ವಿಧಿವಿಧಾನಗಳನ್ನು ನೆರವೇರಿಸಿದರು. ಐಶ್ವರ್ಯಾ ಅವರ ಸಹೋದರ ಆದಿತ್ಯ ರೈ ನೇತೃತ್ವದಲ್ಲಿ ಕ್ರಮಗಳನ್ನು ನಡೆಸಲಾಯಿತು. ಅನಂತರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿದ ಐಶ್ವರ್ಯಾ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಾವು ತಂಗಿದ್ದ ಖಾಸಗಿ ಹೊಟೇಲ್‌ಗೆ ತೆರಳಿ ಊಟ ಮುಗಿಸಿ ವಿಶ್ರಾಂತಿ ಪಡೆದರು. ಸಂಜೆ ಜೆಟ್ ಏರ್‌ವೆಸ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬಯಿಗೆ ಮರಳಿದರು.