ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ಲಿಮಿಟೆಡ್ (ಬಿಐಎಎಲ್) ನಿರ್ವಹಣೆ ನಡೆಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ವಿಶ್ವಮಟ್ಟದ ಪ್ರಯಾಣಿಕ ಸ್ನೇಹಿ-ಸೌಲಭ್ಯಗಳಿಗೆ ಪ್ರಶಂಸೆ ಗಳಿಸಿದ್ದು, ಈಗ ತ್ರೆçಮಾಸಿಕ ಎಸಿಐ-ಎಎಸ್‌ಕ್ಯೂ ಆಗಮನ ಸಮೀಕ್ಷೆಯಲ್ಲಿ ಜಗತ್ತಿನ ವಿವಿಧ ವಿಮಾನ ನಿಲ್ದಾಣಗಳ ನಡುವೆ ಅತ್ಯುನ್ನತ ರೇಟಿಂಗ್ ಪಡೆದುಕೊಂಡಿದೆ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿಮಾರರ್ ತಿಳಿಸಿದರು.
ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಚ್ಚುವರಿಯಾಗಿ ಪ್ರಸ್ತುತ ನಿರ್ಗಮನ ಸಮೀಕ್ಷೆಗಳನ್ನು ವಿಶ್ವವ್ಯಾಪಿಯಾಗಿ 358 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ನಡೆಸಲಾಗಿದ್ದು ಇದರೊಂದಿಗೆ ಆಗಮಿಸುವ ಪ್ರಯಾಣಿಕರ ಸಮೀಕ್ಷೆಯನ್ನು ಮೊದಲ ಬಾರಿಗೆ ಪ್ರತ್ಯೇಕವಾಗಿ ಎಸಿಐ ಪರಿಚಯಿಸಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ತೃಪ್ತಿ ಕುರಿತು ಮೊಟ್ಟಮೊದಲ ಸಮೀಕ್ಷೆಯಲ್ಲಿ ಭಾಗವಸಿದ ಭಾರತದ ಏಕೈಕ ವಿಮಾನ ನಿಲ್ದಾಣವಾಗಿದೆ. 2018ರ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಆಗಮಿಸುವ ಪ್ರಯಾಣಿಕರ ಸಮೀಕ್ಷೆ ನಡೆಸಲಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 5 ಅಂಕದಲ್ಲಿ 4.67 ಅಂಕಗಳನ್ನು ತನ್ನದಾಗಿಸಿಕೊಂಡಿದೆ ಎಂದು ಹೇಳಿದರು.
ಅಬುದಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 4.53 ಅಂಕಗಳೊಂದಿಗೆ 2ನೇ ಸ್ಥಾನ ಪಡೆದರೆ, ಟೊರಾಂಟೊ ಪಿಯರ್‌ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 4.44 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದೆ. ಎಎಸ್‌ಕ್ಯೂ ಆಗಮನ ಸಮೀಕ್ಷೆ 5 ಪ್ರಮುಖ ಕ್ಷೇತ್ರಗಳಲ್ಲಿ ಪ್ರಯಾಣಿಕರ ಅಭಿಪ್ರಾಯಗಳನ್ನು ಅಳೆಯುತ್ತದೆ.
ಇವುಗಳಲ್ಲಿ ಡಿಸ್‌ಎಂಬಾರ್‌ಕೇಷನ್(ವಿಮಾನದಿಂದ ಇಳಿಯುವುದು), ಇಮಿಗ್ರೇಷನ್(ವಲಸೆ ಕ್ರಮಗಳು), (ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾತ್ರ), ಬ್ಯಾಗೇಜ್ ರಿಕ್ಲೇಮ್ (ಪ್ರಯಾಣಿಕರು ತಮ್ಮ ಲಗೇಜ್ ಪಡೆದುಕೊಳ್ಳುವುದು), ಕಸ್ಟಮ್ಸ್ ಅಂಡ್ ಏರ್‌ಪೋರ್ಟ್ ಇನ್‌ಫ್ರಾಸ್ಟ್ರಕ್ಚರ್‌ಗಳು (ಕಸ್ಟಮ್ಸ್ ಮತ್ತು ವಿಮಾನ ನಿಲ್ದಾಣ ಮೂಲಸೌಕರ್ಯ) ಸೇರಿವೆ ಎಂದು ವಿವರಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ತ್ರೆçಮಾಸಿಕದಲ್ಲಿ ಮೊಟ್ಟಮೊದಲ ಎಸಿಐ ಎಎಸ್‌ಕ್ಯೂ ಆಗಮನ ಸಮೀಕ್ಷೆಯಲ್ಲಿ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಸ್ಥಾನ ಪಡೆಯುವುದು ನಿಜಕ್ಕೂ ಅದ್ಭುತ ಸಾಧನೆ.
ಸೇವಾ ಗುಣಮಟ್ಟ ಮತ್ತು ಸೌಲಭ್ಯಗಳನ್ನು ಸುಧಾರಿಸುವತ್ತ ಬದ್ಧತೆ ಮುಂದುವರಿಸಲಿದ್ದೇವೆ. ಇದರೊಂದಿಗೆ ಮುಂದಿನ ಮೂರು ತ್ರೆçಮಾಸಿಕಗಳಲ್ಲಿ ಸಮೀಕ್ಷೆಯ ಅಗ್ರಸ್ಥಾನದಲ್ಲಿ ಉಳಿದುಕೊಳ್ಳುವುದು ಮತ್ತು ವರ್ಷದ ಅತ್ಯುತ್ತಮ ವಿಮಾನ ನಿಲ್ದಾಣದ ರೇಟಿಂಗ್ ಪಡೆಯುವ ಖಾತ್ರಿಯನ್ನೂ ಮಾಡಿಕೊಳ್ಳಲಿದ್ದೇವೆಂದರು.
ವಿಮಾನ ನಿಲ್ದಾಣದ ಯಶಸ್ಸಿಗೆ ಚಾಲನೆ ನೀಡುವ ಸಂಪೂರ್ಣ ವಿಮಾನ ನಿಲ್ದಾಣ ಸಮುದಾಯದ ಅಸಾಧಾರಣ ಪ್ರಯತ್ನ ಮತ್ತು ಬದ್ಧತೆಗೆ ಸಿಕ್ಕಿರುವ ಪ್ರಶಸ್ತಿ ಇದಾಗಿದೆ. ನಮಗೆ ನೀಡಿರುವ ಸತತ ಬೆಂಬಲ ಮತ್ತು ನಮ್ಮ ಮೇಲೆ ಇಟ್ಟುಕೊಂಡಿರುವ ವಿಶ್ವಾಸಕ್ಕಾಗಿ ನಮ್ಮ ಪ್ರಯಾಣಿಕರು, ಪಾಲುದಾರರಿಬ್ಬರಿಗೂ ವಂದಿಸುತ್ತೇವೆಂದರು.