Advertisement

ನವೆಂಬರ್‌ ಅಂತ್ಯಕ್ಕೆ ವಿಮಾನ ನಿಲ್ದಾಣ ಲೋಕಾರ್ಪಣೆ

04:11 PM Mar 19, 2022 | Niyatha Bhat |

ಶಿವಮೊಗ್ಗ: ರಾಜ್ಯದ ಮಧ್ಯಭಾಗದಲ್ಲಿರುವ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಂಡು ನವೆಂಬರ್‌ ಮಾಸಾಂತ್ಯಕ್ಕೆ ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ತಯಾರಿಗಳು ನಡೆದಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಶುಕ್ರವಾರ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈ ಅವಧಿಯೊಳಗಾಗಿ ವಿಮಾನ ನಿಲ್ದಾಣಕ್ಕೆ ಅಗತ್ಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ. ಅಲ್ಲದೆ ಟರ್ಮಿನಲ್‌ ಕಟ್ಟಡ ಮತ್ತಿತರ ಎಲ್ಲಾ ಸೌಲಭ್ಯಗಳೂ ಕೂಡ ಪೂರ್ಣಗೊಳ್ಳಬೇಕಾಗಿದೆ ಎಂದರು.

ನಿಲ್ದಾಣಕ್ಕೆ ಎಲ್ಲಾ ರೀತಿಯ ಸಂಪರ್ಕ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆಯಬೇಕಾಗುವುದು. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಈ ವಿಮಾನ ನಿಲ್ದಾಣವನ್ನು ದೇಶದ ಏರ್ ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಅವರಿಗೆ ವಹಿಸಿಕೊಡುವಂತೆ ಕೋರಲಾಗಿದೆ. ಇದರಿಂದಾಗಿ ಎಲ್ಲಾ ಇಲಾಖೆಗಳ ಪರವಾನಗಿ ಪಡೆಯುವ ಹಾಗೂ ಇತರೆ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಸಂಸ್ಥೆಯು ನಿರ್ವಹಿಸಲಿದೆ ಎಂದರು.

ಈಗಾಗಲೇ ವಿಮಾನ ನಿಲ್ದಾಣಕ್ಕೆ ದೇಶ-ವಿದೇಶದ ಸಂಪರ್ಕ ಕಲ್ಪಿಸಬಹುದಾದ ಸಾಧ್ಯತೆಗಳ ಕುರಿತು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದಲ್ಲದೆ ಈ ಹಿಂದೆಯೇ ದೆಹಲಿಯಲ್ಲಿ ವಿಮಾನಯಾನಕ್ಕೆ ಸಂಬಂಧಿ ಸಿದ ಉನ್ನತ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಯಾವ ಮಾದರಿಯ ವಿಮಾನಗಳನ್ನು ಏರಿಳಿಸಲು ಇರಬಹುದಾದ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದರು.

ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಏರ್‌ಬಸ್‌ ಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಹಗಲು-ಇರುಳು ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ನಿಲ್ದಾಣವನ್ನು ವಿನ್ಯಾಸಗೊಳಿಸಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ಬೆಂಗಳೂರು ನಂತರದ ಅತ್ಯಂತ ಉದ್ದವಾದ 3200ಮೀ. ರನ್‌ವೇಯನ್ನು ಈ ವಿಮಾನ ನಿಲ್ದಾಣ ಹೊಂದಿದೆ. ಈ ಅತ್ಯಾಧುನಿಕ ಸೌಲಭ್ಯಗಳು ಇರುವುದರಿಂದಾಗಿ ವಿಮಾನಯಾನ ಸಂಸ್ಥೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

Advertisement

ಪ್ರಸ್ತುತ ಶಿವಮೊಗ್ಗ ಜಿಲ್ಲೆ ದಶಕದಿಂದೀಚೆಗೆ ವಾಣಿಜ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶೇಷ ಪ್ರಗತಿ ಸಾಧಿಸಿ, ಪ್ರಗತಿಯ ಹೆಜ್ಜೆ ಇರಿಸಿದೆ. ಮಧ್ಯ ಕರ್ನಾಟಕದ ಕೇಂದ್ರಸ್ಥಾನ ಇದಾಗಿರುವುದರಿಂದ ದೇಶದ ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಗೆ ಸಂಚರಿಸಲು ಅನುಕೂಲವಾಗಲಿದೆ. ಉಡಾನ್‌ ಯೋಜನೆಯಡಿ ಈ ವಿಮಾನ ನಿಲ್ದಾಣ ಕಾರ್ಯ ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರವನ್ನು ಅಭಿನಂದಿಸುವುದಾಗಿ ಅವರು ತಿಳಿಸಿದ ಅವರು, ಉಡಾನ್‌ ಯೋಜನೆಯ ಅನುಷ್ಠಾನದಿಂದಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಿಯಾಯಿತಿ ಸೌಲಭ್ಯವೂ ದೊರೆಯಲಿದೆ. ಇದರಿಂದಾಗಿ ಜನಸಾಮಾನ್ಯರೂ ವಿಮಾನಸಂಚಾರ ಮಾಡಬಹುದಾಗಿದೆ ಎಂದರು.

ಜಿಲ್ಲೆಗೆ ಆಗಮಿಸಿ, ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸುವ ಉದ್ಯಮಪತಿಗಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಬಗರ್‌ಹುಕುಂ ಜಮೀನುದಾರರಿಗೆ ಪರಿಹಾರಧನ ನೀಡಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ಸಂಗತಿ ಎಂದರು. ವಿಮಾನ ನಿಲ್ದಾಣದ ಒಟ್ಟು 3200ಮೀ ರನ್‌ವೇಯಲ್ಲಿ 1500ಮೀ. ರನ್‌ವೇ ಈಗಾಗಲೇ ಪೂರ್ಣಗೊಂಡಿದೆ. ಉಳಿದ ರನ್‌ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಜೂನ್‌-ಜುಲೈಗೆ ಪೂರ್ಣಗೊಳ್ಳಲಿದೆ.

ವಿಮಾನ ನಿಲ್ದಾಣದ ಇಕ್ಕೆಲಗಳಲ್ಲಿನ 2 ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಮತ್ತು ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಸಂಬಂಧ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಟರ್ಮಿನಲ್‌ ಕಟ್ಟಡ, ಎ.ಟಿ.ಸಿ. ಕಟ್ಟಡ ಆಗಸ್ಟ್‌- ಸೆಪ್ಟಂಬರ್‌ ಮಾಸಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರೊಂದಿಗೆ ಇತರೆ ಪರಿಶೀಲನೆ, ಪರವಾನಗಿ ಮುಂತಾದ ಪ್ರಕ್ರಿಯೆಗಳು ನಡೆಯಲಿದೆ. ಇದಾದ ನಂತರ ಟೆಂಡರ್‌ ಪ್ರಕ್ರಿಯೆಗಳು ನಡೆಯಲಿವೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಅವರು ನುಡಿದರು. ಈ ಭೇಟಿ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರರುಗಳು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next