Advertisement
ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ನೆಲೆಯಲ್ಲಿ ವಿ. ಸೋಮಣ್ಣ ಸಚಿವರಾಗಿದ್ದಾಗ ಧರ್ಮಸ್ಥಳ ಆಸುಪಾಸಿನಲ್ಲಿ ಮಿನಿ ವಿಮಾನ ನಿಲ್ದಾಣ ವಿಚಾರ ವಾಗಿ ಪ್ರಸ್ತಾವಿಸಿ 200 ಕೋ.ರೂ. ಅಂದಾಜು ವೆಚ್ಚದ ಬಗ್ಗೆ ಕ್ಯಾಬಿನೆಟ್ ಮುಂದಿಟ್ಟಿತ್ತು. ಬಳಿಕದ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಸರಕಾರವು ಈ ವಿಚಾರವನ್ನು ಮುಂದುವರಿಸಿತ್ತು. ಅದರಂತೆ ಸ್ಥಳ ಗುರುತಿಸುವ ಕಾರ್ಯಕ್ಕಾಗಿ ಸರ್ವೇ ಇಲಾಖೆಯ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಗುರುವಾರ ಧರ್ಮಸ್ಥಳ ಕನ್ಯಾಡಿ ಹಾಗೂ ಕಲ್ಮಂಜ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಲ್ಮಂಜ ಗ್ರಾಮದ 153/1 ಸರ್ವೇ ನಂಬರ್‌ನಲ್ಲಿ ಹಾಗೂ ಧರ್ಮಸ್ಥಳ ಗ್ರಾಮದ 57 ಸರ್ವೇ ನಂಬರಿನಲ್ಲಿ ಒಟ್ಟು 157.93 ಎಕ್ರೆ ಜಮೀನನ್ನು ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಗುರುತಿಸಲಾಗಿದೆ. ಈ ಜಮೀನಿನ ಸ್ಥಿತಿಗತಿಯನ್ನು ಅಧಿಕಾರಿಗಳು ಪರಿಶೀಲಿಸಿದರು. ಮಿನಿ ವಿಮಾನ ನಿಲ್ದಾಣಕ್ಕೆಂದು ಗುರುತಿಸಲಾಗಿರುವ ಜಾಗ ಏರು ತಗ್ಗುಗಳಿಂದ ಕೂಡಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡು ಬಂದಿದ್ದು ಇದು ಬಹುತೇಕ ಅರಣ್ಯ ಇಲಾಖೆಯ ವಶ ದಲ್ಲಿರುವ ಅಕೇಶಿಯಾ ಹಾಗೂ ಇತರ ನೆಡುತೋಪುಗಳಾಗಿವೆ. ಮಿನಿವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸುವ ಬಗ್ಗೆ ಮಂಗಳೂರಿನಲ್ಲಿ ಮುಂದಿನ ಸಭೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಅಧಿಕಾರಿ ಡಾ| ರವಿ, ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ತೇಜಸ್ವಿ ಬಿ.ಆರ್., ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ದ್ವಿತೀಯಾ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಭೂಮಾಪನ ಇಲಾಖೆಯ ಎಡಿಎಲ್‌ಆರ್ ರೇಣುಕಾ ನಾಯಕ್, ಡಿಡಿಎಲ್ ಆರ್. ಪ್ರಸಾದಿನಿ, ಲೋಕೋಪಯೋಗಿ ಇಲಾಖೆಯ ಎಇಇ ಅಜಿತಾ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ರಾಕೇಶ್, ಕಂದಾಯ ಇಲಾಖೆಯ ಆರ್‌ಐ ಪ್ರತೀಶ್ ಹಾಗೂ ಸ್ಥಳೀಯ ವಿಎಗಳು ಹಾಗೂ ಇತರರು ತಂಡದಲ್ಲಿದ್ದರು.
Related Articles
Advertisement