Advertisement

ಏರ್‌ಪೋರ್ಟ್‌ ಕಾರ್ಗೊ ಶೇ. 15.3 ಪ್ರಗತಿ

08:57 AM Aug 14, 2020 | Suhan S |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಸರಕು ಸಾಗಣೆ ಮಾರುಕಟ್ಟೆ (ಕಾರ್ಗೊ) ಫ‌ಲಿತಾಂಶ ಪ್ರಕಟಗೊಂಡಿದ್ದು, ಕೋವಿಡ್ ಹಾವಳಿ ನಡುವೆಯೂ ಶೇ. 15.3ರಷ್ಟು ಪ್ರಗತಿ ಕಂಡುಬಂದಿದೆ. ಇದರೊಂದಿಗೆ ವಾರ್ಷಿಕ ಶೇ. 79ರಷ್ಟ್ರು ವೃದ್ಧಿ ಸಾಧಿಸಿದೆ.

Advertisement

ಏಪ್ರಿಲ್‌-ಜೂನ್‌ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ 6,194 ಮೆಟ್ರಿಕ್‌ ಟನ್‌ ಬೇಗ ಹಾಳಾಗುವ ಉತ್ಪನ್ನಗಳು ಹಾಗೂ 2,300 ಮೆಟ್ರಿಕ್‌ ಟನ್‌ ಔಷಧ ಸಂಬಂಧಿ ಉತ್ಪನ್ನಗಳು ಸೇರಿದಂತೆ ಒಟ್ಟಾರೆ 71,406 ಮೆ.ಟ. ಸರಕು ಸಾಗಣೆ ಮಾಡಲಾಗಿದೆ. ಇದರೊಂದಿಗೆ ಶೇ. 15.3ರಷ್ಟು ವೃದ್ಧಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 11.2ರಷ್ಟಿತ್ತು.

ಒಟ್ಟಾರೆ 71,406 ಮೆ.ಟ. ಪೈಕಿ ಅಂತಾರಾಷ್ಟ್ರೀಯ ಸರಕು ಸಾಗಣೆ 51,728 ಮೆ.ಟ. ಇದೆ. ಬೇಗ ಹಾಳಾಗುವ ಉತ್ಪನ್ನಗಳಲ್ಲಿ 507 ಮೆ.ಟ. ಮಾವಿನಹಣ್ಣುಗಳನ್ನು 31 ದೇಶಗಳಿಗೆ ರಫ್ತು ಮಾಡಲಾಗಿದೆ. ಇನ್ನು ಔಷಧಗಳ ಜತೆಗೆ ಎಲೆಕ್ಟ್ರಾನಿಕ್‌ ಮತ್ತು ಎಂಜಿನಿಯರಿಂಗ್‌ ಉಪಕರಣಗಳು, ಬಿಡಿಭಾಗಗಳು, ಸಿದ್ಧ ಉಡುಪುಗಳ ರಫ್ತಿನಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ.

ಕೋವಿಡ್ ಹಾವಳಿಗೂ ಮುನ್ನ ನಾಗರಿಕ ವಿಮಾನಗಳು ಮತ್ತು ಕಾರ್ಗೊ ವಿಮಾನಗಳ ಪ್ರಮಾಣ 60:40ರ ಅನುಪಾತದಲ್ಲಿತ್ತು. ಮಾರ್ಚ್‌ನಿಂದ ಈಚೆಗೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಿಲ್ದಾಣವು ಸಂಪೂರ್ಣ ಕಾರ್ಗೊಕ್ಕೆ ಮೀಸಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಶೇ. 40ರಷ್ಟು ನಾಗರಿಕ ವಿಮಾನಗಳನ್ನು ಕೂಡ ಸರಕು ಸಾಗಣೆಗೆ ಬಳಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ, ಕೆಐಎಎಲ್‌ ಕಾರ್ಗೊ ವಿಭಾಗದಲ್ಲಿ ಶೇ.79ರಷ್ಟು ಬೆಳವಣಿಗೆ ಕಂಡುಬಂದಿದೆ.

ಸಜೀವ ಅಂಗಗಳ ಸಾಗಣೆ :  ಇದೇ ಅವಧಿಯಲ್ಲಿ ಮಾನವನ ಸಜೀವ ಅಂಗಾಂಗಗಳನ್ನೂ ಸಾಗಣೆ ಮಾಡಿದ್ದು ವಿಶೇಷ. ಇಲ್ಲಿನ ಮೆಂಝೀಸ್‌ ಏವಿಯೇಷನ್‌ ಬೊಬ್ಬ ಕಾರ್ಗೋ ಟರ್ಮಿನಲ್‌, ಮೇ 1ರಂದು ಬೆಂಗಳೂರಿನಿಂದ ಫ್ರಾಂಕ್‌ಫ‌ರ್ಟ್‌ಗೆ ಸ್ಟೆಮ್‌ಸೆಲ್‌ಗ‌ಳು ಹಾಗೂ ಅಸ್ತಿರಜ್ಜು ಕೊಂಡೊಯ್ದಿತ್ತು. ಇದೇ ರೀತಿ, ಮೇ 16ರಂದು ಕೂಡ ಸ್ಟೆಮ್‌ ಸೆಲ್‌ ಮತ್ತು ಅಸ್ತಿರಜ್ಜು ರಫ್ತು ಮಾಡಲಾಗಿತ್ತು.

Advertisement

38,896 ಪ್ರಯಾಣಿಕರು ಸಂಚಾರ :  ಏಪ್ರಿಲ್‌ 1ರಿಂದ ಜುಲೈ 31ರವರೆಗೆ 38,896 ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ 186 ವಂದೇ ಭಾರತ್‌ ಮಿಷನ್‌ ವಿಮಾನಗಳು ಹಾರಾಟ ನಡೆಸಿದ್ದು, ಇದರಲ್ಲಿ 24,039 ಪ್ರಯಾಣಿಕರು ವಿವಿಧ ದೇಶಗಳಿಂದ ಇಲ್ಲಿಗೆ ಆಗಮಿಸಿದ್ದಾರೆ. ಅದೇ ರೀತಿ, 14,857 ಪ್ರಯಾಣಿಕರನ್ನು ಇಲ್ಲಿಂದ ಬೇರೆ ಬೇರೆ ದೇಶಗಳಿಗೆ ತೆರಳಿದ್ದಾರೆ. ಕಳೆದ ಮೇ 7ರಂದು ವಂದೇ ಭಾರತ್‌ ಅಭಿಯಾನ ಆರಂಭಗೊಂಡಿತ್ತು.

341 ಮೆಗಾ ಟನ್‌ ಕೋವಿಡ್ ಸಾಮಗ್ರಿ :  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಚ್‌ನಿಂದ ಜುಲೈವರೆಗೆ 341 ಮೆಟ್ರಿಕ್‌ ಟನ್‌ಗಳಷ್ಟು ಕೋವಿಡ್‌ -19 ಸಂಬಂಧಿತ ಸರಕು ಸಾಗಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next