ಬೆಂಗಳೂರು: ವ್ಯಾಪಾರಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುಂಕ ಅಧೀಕ್ಷಕ ಎ.ಎಂ. ಶಫೀವುಲ್ಲಾ, ಕಳೆದ ಹತ್ತು ವರ್ಷಗಳಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದು, ಈ ಪೈಕಿ ಶೇ.97ರಷ್ಟು ಅಕ್ರಮ ಆಸ್ತಿಯಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಲಂಚ ಸ್ವೀಕಾರ ಪ್ರಕರಣ ಸಂಬಂಧ ಶಫೀವುಲ್ಲಾ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದಾಗ ಆರೋಪಿತ ಅಧಿಕಾರಿ ಕಳೆದ 10 ವರ್ಷಗಳಲ್ಲಿ ಶೇ 97.34ರಷ್ಟು ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. ಶಫೀವುಲ್ಲಾ, 2009ರಿಂದ ಅಧಿಕ್ಷಕ ಹುದ್ದೆಗೆ ಬಡ್ತಿ ಪಡೆಯುತ್ತಲೇ ಅಧಿಕಾರ ದುರ್ಬಳಕೆ ಮಾಡಿಕೊಂಡು, ಪತ್ನಿ ಅಶ್ರಾ ಶಫೀ ಹಾಗೂ ಸಂಬಂಧಿಕರ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದು, ಕಲಬುರಗಿ ಜಿಲ್ಲೆಯ ಸ್ವಂತ ಗ್ರಾಮ ಅಜಾದ್‌ಪುರ ಹಾಗೂ ಏರ್‌ಪೋರ್ಟ್ ಬಳಿಯ ದೇವನಹಳ್ಳಿಯಲ್ಲಿ ನಿವೇಶನ, ಚಿನ್ನಾಭರಣ ಖರೀದಿ ಜತೆಗೆ ವಿವಿಧ ಕಂಪೆನಿಗಳ ಷೇರುಗಳಲ್ಲಿ ಭಾರೀ ಮೊತ್ತದ ಹಣ ಹೂಡಿದ್ದಾನೆ.
2009ರಿಂದ 2018ರ ಮಾ.1ರ ನಡುವಿನ ಅವಧಿಯಲ್ಲಿ ಆರೋಪಿ ಶಫೀವುಲ್ಲಾ, 27,84,102 ರೂ.ಗಳನ್ನು ಅಕ್ರಮವಾಗಿ ಗಳಿಸಿದ್ದಾನೆ ಎಂದು ಸಿಬಿಐ ಅಧಿಕಾರಿಗಳು ಎಫ್ಐಆರ್‌ನಲ್ಲಿ ಉಲ್ಲೇಖೀಸಿದ್ದಾರೆ. ಆರೋಪಿ ಶಫೀವುಲ್ಲಾನ ವೇತನದ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದು, ಇದರ ಹೊರತು ಖಾಸಗಿ ಬ್ಯಾಂಕ್‌ಗಳಲ್ಲಿ ಇನ್ನೂ ಮೂರು ಖಾತೆಗಳನ್ನು ಆರೀಪಿ ಹೊಂದಿದ್ದಾನೆ.
ಪತ್ನಿ, ಅಶ್ರಾ ಶಫೀ ಹೆಸರಲ್ಲಿ 2 ಬ್ಯಾಂಕ್ ಖಾತೆಗಳಿದ್ದು, ಇಶಾನ್ ಹಾಗೂ ರಸೂಲ್ ಎಂಬುವವರ ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ವರ್ಗಾವಣೆ ಮಾಡಲಾಗಿದೆ. ಜತೆಗೆ ನಾನಾ ವಿಮಾ ಕಂಪನಿಗಳಲ್ಲಿ ಹಣ ಹೂಡಲಾಗಿದೆ. ಆರೋಪಿ ಕುಟುಂಬದ ಬಳಿ 6.69 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದರು.
ಮಾ.1ರಂದು ವಿದೇಶದಿಂದ ತರಲಾಗಿದ್ದ ಸಂಗೀತ ಉಪಕರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಿಮಾನ ನಿಲ್ದಾಣದಿಂದ ಹೊರಗೆ ಬಿಡಲು ನ್ಯೂ ತಿಪ್ಪಸಂದ್ರ ನಿವಾಸಿ ಮುತ್ತುಕೃಷ್ಣನ್‌ಗೆ, ಶಫೀವುಲ್ಲಾ 30 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ ಮುತ್ತುಕೃಷ್ಣನ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಲಂಚ ಸ್ವೀಕರಿಸುವಾಗಲೇ ಅಧೀಕ್ಷಕ ಶಫೀವುಲ್ಲಾನನ್ನು ಬಂಧಿಸಿದ್ದರು.