ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶನಿವಾರ ಬೆಂಗಳೂರು-ಶ್ರೀಹರಿಕೋಟಾ ಹಾಗೂ ಬೆಂಗಳೂರು- ಆಲೆಪ್ಪಿ ನಡುವೆ ಐರಾವತ ಡೈಮಂಡ್ ಕ್ಲಾಸ್ ಬಸ್ ಸೇವೆಗೆ ಚಾಲನೆ ದೊರೆಯಿತು.
ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹಾಗೂ ಆಲೆಪ್ಪಿ ಸಂಸದ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸಿದರು.
ನಂತರ ಮಾತನಾಡಿದ ಸಚಿವ ಎಚ್.ಎಂ.ರೇವಣ್ಣ, “ಕೆಎಸ್‌ಆರ್‌ಟಿಸಿ ಅಂತಾರಾಜ್ಯ ಸಾರಿಗೆ ಸೇವೆಗಳಿಗಾಗಿ ಹಲವು ರಾಜ್ಯಗಳೊಂದಿಗೆ ಒಪ್ಪಂದ ಮಾಡಿ ಕೊಂಡಿದೆ. 2 ತಿಂಗಳ ಹಿಂದೆ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ನೂತನ ಮಾರ್ಗಗಳಲ್ಲಿ ಬಸ್ ಸೇವೆ ಕಲ್ಪಿಸಲು ಅಲ್ಲಿನ ಸಾರಿಗೆ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಭಾಗವಾಗಿ ಕೇರಳಕ್ಕೆ ಬಸ್ ಸೇವೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.
ಖಾಸಗಿ ಸಹಭಾಗಿತ್ವದಿಂದ ಅಭಿವೃದ್ಧಿ: ಬಿಎಂಟಿಸಿಗೆ 3 ಸಾವಿರ ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ. ಈ ಪೈಕಿ 1,500 ಸಾವಿರ ಬಸ್‌ಗಳನ್ನು ರಾಜ್ಯ ಸರ್ಕಾರವೇ ನೀಡಲಿದೆ. ಉಳಿದ 1,500 ಸಾವಿರ ಬಸ್‌ಗಳನ್ನು ಖಾಸಗಿಯವರಿಂದ ಗುತ್ತಿಗೆಗೆ ಪಡೆಯ ಲಾಗುವುದು. ಖಾಸಗಿ ಯವರಿಂದ ಬಸ್ ಮಾತ್ರ ಪಡೆದು ನಿಗಮದ ಸಿಬ್ಬಂದಿಯನ್ನೇ ನಿಯೋಜಿಸಲಾ ಗುವುದು ಎಂದು ಸಚಿವ ರೇವಣ್ಣ ಸ್ಪಷ್ಟಪಡಿಸಿದರು.
ಬಿಎಂಟಿಸಿಗೆ ಎಲೆಕ್ಟ್ರಿಕ್ ಚಾಲಿತ ಬಸ್ ಸೇರ್ಪಡೆಗೆ ಸಂಬಂಧಿಸಿದಂತೆ ಪೂರಕ ಪ್ರಕ್ರಿಯೆಗಳು ನಡೆದಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್, ಅಧ್ಯಕ್ಷ ಗೋಪಾಲ ಪೂಜಾರಿ, ಬಿಎಂಟಿಸಿ ಅಧ್ಯಕ್ಷ ನಾಗರಾಜ (ಯಾದವ್) ಮತ್ತಿತರರು ಉಪಸ್ಥಿತರಿದ್ದರು.
ದುಪ್ಪಟ್ಟು ವಸೂಲಿ; ಕ್ರಮ
ಹಬ್ಬ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಖಾಸಗಿ ಬಸ್ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಚ್.ಎಂ. ರೇವಣ್ಣ ಎಚ್ಚರಿಸಿದರು. ಹಬ್ಬದ ಸಂದರ್ಭಗಳಲ್ಲಿ ಪರಿಸ್ಥಿತಿಯ ಲಾಭ ಪಡೆದು ಖಾಸಗಿ ಬಸ್ ಆಪರೇಟರ್‌ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.