Advertisement
ಬೃಹತ್ ಸಂಸ್ಥೆಗಳ ಆಸಕ್ತಿಕಿರು ವಿಮಾನ ನಿಲ್ದಾಣ ಯೋಜನೆಯಲ್ಲಿ ಪಾಲುದಾರರಾಗುವ ಆಸಕ್ತಿಯೊಂದಿಗೆ ಹಲವು ಬೃಹತ್ ಸಂಸ್ಥೆಗಳು ಮುಂದಕ್ಕೆ ಬಂದಿವೆ ಎಂದು ಪ್ರಿನ್ಸಿಪಲ್ ಕಾರ್ಯದರ್ಶಿ ಕೆ.ಆರ್.ಜ್ಯೋತಿಲಾಲ್ ತಿಳಿಸಿದ್ದಾರೆ. ಬೃಹತ್ ಸಂಸ್ಥೆಗಳು ಕಿರು ವಿಮಾನ ನಿಲ್ದಾಣ ಯೋಜನೆಯ ಬಗ್ಗೆ ಆಸಕ್ತಿ ವಹಿಸಿರುವುದರಿಂದ ಹೊಸ ಜೀವ ಬಂದಂತಾಗಿದೆ. ಪೆರಿಯದಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಯೋಜನೆ ಬಗ್ಗೆ ಅಧ್ಯಯನ ನಡೆಸಲು ನಾಗರಿಕ ವ್ಯೋಮಯಾನ ಇಲಾಖೆಯ ಹೊಣೆಗಾರಿಕೆ ಹೊಂದಿರುವ ಪ್ರಿನ್ಸಿಪಲ್ ಕಾರ್ಯದರ್ಶಿ ಕೆ.ಆರ್. ಜ್ಯೋತಿಲಾಲ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಈಗಾಗಲೇ ರಚಿಸಲಾಗಿದೆ. ಈ ಯೋಜನೆಗಾಗಿ ಗುರುತಿಸಿರುವ ಸ್ಥಳದಲ್ಲಿ ಪರಿಶಿಷ್ಟ ವಿಭಾಗ ಕಾಲನಿಯಲ್ಲಿ 20 ಮನೆಗಳಿದ್ದು ಅವರನ್ನು ತೆರವುಗೊಳಿಸಬೇಕಾಗಿ ಬರಲಿದೆ. ಅದಕ್ಕೆ ಪರ್ಯಾಯವಾಗಿ ಅವರಿಗೆ ಹೊಸ ಸ್ಥಳ ಮತ್ತು ಪುನರ್ವಸತಿ ಕಲ್ಪಿಸಿಕೊಡಬೇಕಾಗಿದೆ. ಅದಕ್ಕೆ ಕಂದಾಯ ಇಲಾಖೆ ಅಗತ್ಯದ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಕಿರು ವಿಮಾನ ನಿಲ್ದಾಣ ಕಾರ್ಯಾರಂಭಗೊಂಡಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಧಾನ ಪ್ರವಾಸೋದ್ಯಮ ಕೇಂದ್ರವಾಗಿ ಬದಲಾಗಲಿದೆ. ಕಣ್ಣೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗಾಗಲೇ ಕಾರ್ಯಾರಂಭಗೊಳ್ಳಲಿದೆ. ಅಲ್ಲಿಂದ ಮತ್ತು ಮಂಗಳೂರು ಹಾಗೂ ಮತ್ತಿತರ ವಿಮಾನ ನಿಲ್ದಾಣಗಳಿಂದ ಪೆರಿಯ ಕಿರು ವಿಮಾನ ನಿಲ್ದಾಣಗಳಿಗೆ ಕಿರು ವಿಮಾನಗಳಲ್ಲಿ ಪ್ರವಾಸಿಗರನ್ನು ಜಿಲ್ಲೆಗೆ ತರಲು ಈ ಯೋಜನೆಯಿಂದ ಸಾಧ್ಯವಾಗಲಿದೆ. ಮಾತ್ರವಲ್ಲ ಇದರಿಂದ ಬೇಕಲ ಪ್ರವಾಸೋದ್ಯಮ ಯೋಜನೆ ಮಾತ್ರವಲ್ಲ, ಜಿಲ್ಲೆಯ ಇತರ ಎಲ್ಲಾ ಪ್ರವಾಸಿ ಕೇಂದ್ರಗಳಿಗೆ ದೇಶಿ ಮತ್ತು ವಿದೇಶಿ ಪ್ರವಾಸಿಗರು ಹರಿದು ಬರುವ ಸಾಧ್ಯತೆಯಲ್ಲಿ ಹೆಚ್ಚಳವಾಗಲಿದೆ. ಈ ಮೂಲಕ ಅದು ಜಿಲ್ಲೆಗೆ ಅಂತಾರಾಷ್ಟ್ರೀಯ ಭೂಪಟದಲ್ಲಿ ಪ್ರಮುಖ ಸ್ಥಾನ ನೀಡಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಕಾಸರಗೋಡು ಕಿರು ವಿಮಾನ ನಿಲ್ದಾಣ ಜಿಲ್ಲಾ ಪಂಚಾಯತ್‌ನ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆ ಬಗ್ಗೆ ಅಧ್ಯಯನ ನಡೆಸಲು ರೂಪೀಕರಿಸಲಾಗಿರುವ ಕೆ.ಆರ್.ಜ್ಯೋತಿಲಾಲ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ, ಬೇಕಲ ರಿಸೋರ್ಟ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ನ (ಬಿ.ಆರ್.ಡಿ.ಸಿ.) ಎಂ.ಡಿ., ಹಣಕಾಸು ಇಲಾಖೆ ಮತ್ತು ಸಿಯಾಲ್‌ನ ಪ್ರತಿನಿಧಿಗಳು ಒಳಗೊಂಡಿದ್ದಾರೆ. ಪೆರಿಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ 2011ರಲ್ಲೇ ರಾಜ್ಯ ಸರಕಾರ ತಾಂತ್ರಿಕ ಅಂಗೀಕಾರ ನೀಡಿತ್ತು. ಅದಕ್ಕಾಗಿ ಪೆರಿಯದಲ್ಲಿ 80.41 ಎಕ್ರೆ ಸ್ಥಳ ಗುರುತಿಸಲಾಗಿದೆ. ಇದರಲ್ಲಿ 51.65 ಎಕ್ರೆ ಸ್ಥಳ ಸರಕಾರಿ ಮಾಲಕತ್ವದಲ್ಲಿದೆ. 28.76 ಎಕ್ರೆ ಸ್ಥಳ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದಾಗಿದೆ. ಖಾಸಗಿ ಭೂಮಿ ವಶಪಡಿಸಲು ಅವರಿಗೆ ಅಗತ್ಯದ ನಷ್ಟ ಪರಿಹಾರ ಮತ್ತಿತರ ಸವಲತ್ತುಗಳನ್ನು ನೀಡಲು ಸರಕಾರ ಈಗಾಗಲೇ ಮುಂದಾಗಿದೆ.