ಹೊಸದಿಲ್ಲಿ: ಚಂಡಮಾರುತ ಸಾಮಾನ್ಯವಾಗಿ ಭೂಮಿಗೆ ಅಪ್ಪಳಿಸಿದ ಅನಂತರ ತೀವ್ರತೆ ಕಡಿಮೆಯಾಗುತ್ತದೆಯಾದರೂ, ಗುಜರಾತ್ ಕರಾವಳಿಗೆ ಅಪ್ಪಳಿಸುವ ವಾಯು ಚಂಡಮಾರುತದ ತೀವ್ರತೆಯು ಅನಂತರ ಒಂದು ದಿನದವರೆಗೆ ತೀಕ್ಷ್ಣವಾಗಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ ಚಂಡಮಾರುತ ಅತ್ಯಂತ ತೀಕ್ಷ್ಣವಾಗಿದ್ದು, ಗಂಟೆಗೆ 170 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಊಹಿಸಲಾಗಿದೆ. ಈ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಅಲರ್ಟ್ ಹೊರಡಿಸಲಾಗಿದೆ. ಚಂಡಮಾರುತ ಅಪ್ಪಳಿಸುವ ಗುಜರಾತ್ ಹಾಗೂ ದಿಯು ಕೇಂದ್ರಾಡಳಿತ ಪ್ರದೇಶದಲ್ಲಿ 3 ಲಕ್ಷ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇವರ ರಕ್ಷಣೆಗೆ 700 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ.
ತಲಾ 45 ಸಿಬಂದಿ ಇರುವ 52 ಎನ್‌ಡಿಆರ್‌ಎಫ್ ತಂಡಗಳು ಸಿದ್ಧವಿದ್ದು, ಈಗಾಗಲೇ ಗುಜರಾತ್‌ಗೆ ತೆರಳಿವೆ. ಅಲ್ಲದೆ, ಭಾರತೀಯ ಸೇನೆಯ 10 ತುಕಡಿಗಳು ಕೂಡ ಸಿದ್ಧವಾಗಿವೆ. ಇನ್ನೊಂದೆಡೆ ಕರಾವಳಿಯಲ್ಲಿ ಯುದ್ಧನೌಕೆಗಳು ಮತ್ತು ಯುದ್ಧ ವಿಮಾನಗಳು ಕೂಡ ಸಿದ್ಧ ಸ್ಥಿತಿಯಲ್ಲಿವೆ.
ಮುಳುಗು ತಜ್ಞರು ಹಾಗೂ ರಕ್ಷಣಾ ತಂಡಗಳು ಸನ್ನದ್ಧವಾಗಿದ್ದು, ರಕ್ಷಣಾ ಸಾಮಗ್ರಿಗಳೂ ಸಾಗಣೆಗೆ ಸಿದ್ಧವಾಗಿವೆ. ಮುಂಬಯಿಯ ನೌಕಾ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಇತರ ಸಹಾಯಕ ಸಿಬಂದಿ ಯಾವುದೇ ಕ್ಷಣದಲ್ಲೂ ಗುಜರಾತ್‌ಗೆ ಧಾವಿಸಿ ಸಂತ್ರಸ್ತರಿಗೆ ಚಿಕಿತ್ಸೆ ಒದಗಿಸಲು ತಯಾರಿಯಲ್ಲಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಮಿತಿ ಯೊಂದಿಗೆ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಸಭೆ ನಡೆಸಿದ್ದು, ರಕ್ಷಣಾ ಕಾರ್ಯ ಕುರಿತು ಸಮಗ್ರ ಚರ್ಚೆ ನಡೆಸಿದ್ದಾರೆ. ಗುಜರಾತ್ ಹಾಗೂ ದಿಯು ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಲಿದ್ದು, ಈ ಎರಡೂ ಪ್ರದೇಶದ ಪ್ರಮುಖ ಅಧಿಕಾರಿಗಳೊಂದಿಗೆ ರಾಜೀವ್ ಸಭೆ ನಡೆಸಿದ್ದಾರೆ.
ಕ್ಷಣ ಕ್ಷಣ ಮಾಹಿತಿ ಗಮನಿಸಿ: ಪ್ರಧಾನಿ
ಸೈಕ್ಲೋನ್ ಅಪ್ಪಳಿಸುವ ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳ ಜನರು ಸುರಕ್ಷಿತವಾಗಿರುವಂತೆ ಪ್ರಾರ್ಥಿಸಿರುವ ಪ್ರಧಾನಿ ಮೋದಿ, ಅವರು ಕ್ಷಣ ಕ್ಷಣದ ಮಾಹಿತಿ ಗಮನಿಸುತ್ತಿರಬೇಕು ಎಂದೂ ಆಗ್ರಹಿಸಿದ್ದಾರೆ. ‘ವಾಯು’ ಚಂಡಮಾರುತ ಅಪ್ಪಳಿಸುವ ಪ್ರದೇಶದ ಎಲ್ಲರೂ ಸುರಕ್ಷಿತವಾಗಿ ಇರಲೆಂದು ಪ್ರಾರ್ಥಿಸುತ್ತೇನೆ. ಸರಕಾರ ಮತ್ತು ಸ್ಥಳೀಯ ಆಡಳಿತಗಳು ಕ್ಷಣ ಕ್ಷಣದ ಮಾಹಿತಿ ಒದಗಿಸುತ್ತಿದೆ. ಚಂಡಮಾರುತ ಪೀಡಿತ ಪ್ರದೇಶಗಳ ಜನರು ಇದನ್ನು ಗಮನಿಸುತ್ತಿರಬೇಕು ಎಂದು ನಾನು ವಿನಂತಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.