ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಫೆ.20ರಿಂದ 24ರವರೆಗೆ ನಡೆಯುವ ಏರ್ ಶೋಗೆ ಸಂಬಂಧಿಸಿದಂತೆ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತಲಿನ ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕೋಳಿ, ಕುರಿ, ಹಂದಿ, ಹಸು, ಮೀನುಗಳ ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ತಿಳಿಸಿದರು.
ತಾಲೂಕಿನ ಚಪ್ಪರದಕಲ್ಲು ಬಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ ಶೋ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾಂಸದ ಅಂಗಡಿ ಬಂದ್ ಮಾಡಿಸಿ: ಏರ್ ಶೋಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕುಗಳ ಪುರಸಭಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾಲೂ ಕು ದಂಡಾಧಿಕಾರಿಗಳಿಗೆ ಸೂಚಿಸಲಾಗಿದೆ. ಫೆ.20 ರಿಂದ 24ರವರೆಗೆ ಯಲಹಂಕದ ಏರ್‌ಫೋರ್ಸ್‌ನಲ್ಲಿ ನಡೆಯುವ ಏರ್-ಶೋಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಲು ಫೆ.18 ರಿಂದ 24ರವರೆಗೆ ತಾಲೂಕಿನಲ್ಲಿರುವ ಎಲ್ಲಾ ತರಹದ ಮಾಂಸದ ಅಂಗಡಿ ಹಾಗೂ ಮಾಂಸದ ಹೋಟೆಲ್‌ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪಕ್ಷಿಗಳ ಬಗ್ಗೆ ಎಚ್ಚರ ವಹಿಸಿ: ಮಾಂಸದ ಒಂದು ತುಂಡು ಬಿದ್ದಿದ್ದರೂ ಸಹ ಹದ್ದುಗಳು ಬಾನಿನೆತ್ತರಕ್ಕೆ ಹಾರುತ್ತವೆ. ಏರೋ ಶೋ ಮುಗಿಯುವವರೆಗೂ ಎಚ್ಚರ ವಹಿಸಬೇಕು. ಕ್ಯಾಟ್ಫಿಷ್‌ಗಳು ಸಹ ಇಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು, ತಾಪಂ ಇಒ, ಪುರಸಭೆ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳಿಗೂ ಈ ಬಗ್ಗೆ ಸೂಚಿಸಲಾಗಿದೆ. ನಿಮ್ಮ ವ್ಯಾಪ್ತಿಯ ಪುರಸಭೆಯವರು ಕೂಡಲೇ ರಸ್ತೆ ಅಕ್ಕ ಪಕ್ಕದಲ್ಲಿ ಕೋಳಿ ಅಂಗಡಿ ತೆರೆಯುವುದಾಗಲಿ, ಕಸ ಹಾಕುವುದಾಗಲಿ ಮಾಡದಂತೆ ಸ್ಥಳೀಯ ಮಾಂಸದ ಅಂಗಡಿಗಳ ಹಾಗೂ ಹೊಟೇಲ್ ಮಾಲಿಕರಿಗೆ ಎಚ್ಚರಿಕೆ ನೀಡಬೇಕು. ಪುರಸಭೆಯವರು ಕಸ ಹಾಕಿರುವುದನ್ನು ಗಮನಿಸಿ ಸ್ವಚ್ಛಗೊಳಿಸಬೇಕು. ಯಾವುದೇ ಪಕ್ಷಿಗಳ ಹಾರಾಟ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮಾಂಸದಂಗಡಿ ಮಾಲಿಕರ ಸಭೆ: ತಹಶೀಲ್ದಾರ್ ಎಂ.ರಾಜಣ್ಣ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಸೋಮವಾರ ತಾಲೂಕಿನಲ್ಲಿರುವ ಮಾಂಸದ ಅಂಗಡಿ ಮಾಲಿಕರು, ಮಾಂಸದ ಹೋಟೆಲ್ ಮಾಲಿಕರು ಹಾಗೂ ಸ್ಥಳೀಯ ಮಾಂಸ ಮಾರಾಟ ಅಂಗಡಿಗಳ ಮಾಲಿಕರ ಸಭೆ ಕರೆದು, ಫೆ.18 ರಿಂದ 24ರವರೆಗೆ ಮಾಂಸ ಮಾರಾಟ ಮಾಡದಂತೆ ಕಟ್ಟೆಚ್ಚರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹನುಮಂತೇಗೌಡ, ಜಿಲ್ಲಾ ಡಳಿತ ಕಚೇರಿ ಸಹಾಯಕ ಎಂ.ಸಿ.ನರಸಿಂಹಮೂರ್ತಿ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.