ಹೊಸದಿಲ್ಲಿ: ದೇಶದಲ್ಲಿ ವಾಯುಮಾಲಿನ್ಯದಿಂದಾಗಿ ಕಳೆದ ವರ್ಷ ಸುಮಾರು 17 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ! ಇದು “ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್’ ಎಂಬ ವೈಜ್ಞಾನಿಕ ನಿಯತಕಾಲಿಕದ ವರದಿಯಲ್ಲಿ ಉಲ್ಲೇಖವಾಗಿರುವ ಅಂಶ. ಅಷ್ಟೇ ಅಲ್ಲ, ವಾಯು ಮಾಲಿನ್ಯವು ದೇಶದ ಜಿಡಿಪಿಗೆ ಸುಮಾರು 2.60 ಸಾವಿರ ಕೋಟಿ ರೂ. ನಷ್ಟ ಉಂಟುಮಾಡಿದೆ ಎಂದು ಈ ವರದಿ ತಿಳಿಸಿದೆ. “ವಾಯುಮಾಲಿನ್ಯದಿಂದಾಗಿ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ’ ಎಂಬ ವರದಿಯಲ್ಲಿ ಈ ಅಂಶಗಳು ಉಲ್ಲೇಖವಾಗಿವೆ. 1990ರಿಂದ 2019ರ ಅವಧಿಯಲ್ಲಿ ಮನೆಯೊಳಗಿನ ವಾಯುಮಾಲಿನ್ಯ ತೀರಾ ಕಡಿಮೆಯಾಗಿದೆ. ಆದರೆ ಮನೆಯ ಹೊರಗಿನ ಅದು ಶೇ. 115ರಷ್ಟು ಹೆಚ್ಚಿದ್ದು, ಸಾವಿನ ಪ್ರಮಾಣ ಏರಿದೆ ಎಂದು ವರದಿ ಹೇಳಿದೆ.
ಉತ್ತರ ಭಾರತದಲ್ಲೇ ಹೆಚ್ಚು
ವಾಯುಮಾಲಿನ್ಯದಿಂದಾಗಿ ಹೆಚ್ಚು ನಷ್ಟವಾಗುತ್ತಿರುವುದು ಉತ್ತರ ಮತ್ತು ಕೇಂದ್ರ ಭಾರತದ ರಾಜ್ಯಗಳಿಗೆ. ಉತ್ತರಪ್ರದೇಶದಲ್ಲಿ ಅತೀ ಹೆಚ್ಚು,
ಶೇ. 2.2ರಷ್ಟು ಜಿಡಿಪಿ ನಷ್ಟವಾಗಿದೆ.
ಶ್ವಾಸಕೋಶಕ್ಕೆ ತೊಂದರೆ
ವಾಯು ಮಾಲಿನ್ಯದಿಂದ ಶ್ವಾಸ ಕೋಶಕ್ಕೆ ತೊಂದರೆಯಾಗುತ್ತಿದೆ. ಒಟ್ಟು ಸಾವಿನ ಪ್ರಮಾಣದಲ್ಲಿ ಶೇ. 40ರಷ್ಟು ಶ್ವಾಸಕೋಶ ತೊಂದರೆಯಿಂದಲೇ ಸಂಭವಿಸಿವೆ ಎಂದು ಐಸಿಎಂಆರ್‌ನ ನಿರ್ದೇಶಕ ಪ್ರೊ| ಬಲರಾಮ್ ಭಾರ್ಗವ ಹೇಳಿದ್ದಾರೆ.