Advertisement
ಈಗಲೇ ದಿಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಶೋಚನೀಯ. ಇನ್ನು ದೀಪಾವಳಿ ಪಟಾಕಿಗಳನ್ನೆಲ್ಲ ಹೊಡೆದ ಅನಂತರ ಹೇಗಿರಬಹುದು ಎನ್ನುವುದು ಆತಂಕಕ್ಕೆ ಕಾರಣ. 2017ರಲ್ಲಿ ಶ್ರೀಲಂಕಾ ಕ್ರಿಕೆಟಿಗರು ದಿಲ್ಲಿ ವಾಯುಮಾಲಿನ್ಯಕ್ಕೆ ಹೊಂದಿಕೊಳ್ಳಲಾಗದೆ ಅಸ್ವಸ್ಥರಾಗಿದ್ದರು. ಕೆಲವರು ಮೈದಾನದಲ್ಲೇ ವಾಂತಿ ಮಾಡಿಕೊಂಡಿದ್ದರು. ಮಾಸ್ಕ್ ಧರಿಸಿ ಆಡಿದ ದೃಶ್ಯವೂ ಕಂಡುಬಂದಿತ್ತು. ಆ ಕಹಿ ನೆನಪು ಇನ್ನೂ ಮಾಸಿಲ್ಲ. ಹೀಗಿರುವಾಗ ಬಾಂಗ್ಲಾ ವಿರುದ್ಧ ಹೊಸದಿಲ್ಲಿಯಲ್ಲೇ ಪಂದ್ಯ ಆಯೋಜಿಸಿರುವ ಬಿಸಿಸಿಐ ಕ್ರಮ ಪ್ರಶ್ನಾರ್ಹ ಎಂದು ತರ್ಕಿಸಲಾಗುತ್ತಿದೆ.
ಏರ್ ಕ್ವಾಲಿಟಿ ಇಂಡೆಕ್ಸ್ ಸಂಸ್ಥೆಯ ಶ್ರೇಯಾಂಕದ ದಿಲ್ಲಿ ವಾಯುಮಾಲಿನ್ಯ ಮಟ್ಟ 357ರಲ್ಲಿದೆ. ಅಂದರೆ ಅತ್ಯಂತ ಕಳಪೆ ಪರಿಸ್ಥಿತಿ. ದೀಪಾವಳಿ ಅನಂತರ ಮಾಲಿನ್ಯ ಇನ್ನೂ ಹೆಚ್ಚಲಿದೆ. ಇದನ್ನು ಅಂದಾಜಿಸದೆ ಬಿಸಿಸಿಐ ಪಂದ್ಯ ನಿಗದಿಪಡಿಸಿತೇ ಎನ್ನುವುದು ಈಗ ಕೇಳಲಾಗುತ್ತಿರುವ ಪ್ರಶ್ನೆ. ಪಂದ್ಯ ನಡೆಯುವಾಗ ದೀಪಾವಳಿ ಮುಗಿದು ಒಂದು ವಾರವಾಗಿರುತ್ತದೆ. ಅಷ್ಟರಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದಿರುತ್ತದೆ ಎನ್ನುವುದು ಬಿಸಿಸಿಐ ಆಶಾವಾದ. ದಿಲ್ಲಿ ಸಮೀಪದ ಹರ್ಯಾಣ-ಪಂಜಾಬ್‌ನ ರೈತರಿಗೆ ಭತ್ತದ ಹುಲ್ಲನ್ನು ಕೆಲವು ದಿನಗಳ ಮಟ್ಟಿಗೆ ಸುಡಲೇಬಾರದು ಎಂದು ಕೇಂದ್ರ ಸರಕಾರ ತಾಕೀತು ಮಾಡಿರುವುದೂ ಕೂಡ ತಮ್ಮ ನೆರವಿಗೆ ಬರಬಹುದೆಂದು ಬಿಸಿಸಿಐ ಭಾವಿಸಿದೆ.