Advertisement

ಗಾಳಿ-ಬೆಳಕಿನಷ್ಟೇ ಯೋಗವೂ ಅನಿವಾರ್ಯ

04:40 PM May 22, 2018 | Team Udayavani |

ಚಿತ್ರದುರ್ಗ: ಮನುಷ್ಯನಿಗೆ ಗಾಳಿ, ಬೆಳಕು, ನೀರು ಎಷ್ಟು ಮುಖ್ಯವೋ ಯೋಗವೂ ಅಷ್ಟೇ ಅನಿವಾರ್ಯ. ಇದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ಈಶ್ವರೀಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ವಿಶ್ವ ಯೋಗ ದಿನ ಘೋಷಿಸಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಯೋಗಕ್ಕೆ ವಿಶೇಷ ಸ್ಥಾನ ನೀಡಿ ಗೌರವಿಸಲಾಗಿದೆ. ಆಧುನಿಕ ವೈದ್ಯಕೀಯ ಚಿಕಿತ್ಸೆಯಿಂದ ಗುಣವಾಗದ ಕಾಯಿಲೆಗಳನ್ನು ಯೋಗ ಗುಣಪಡಿಸಿದೆ ಎಂದು ತಿಳಿಸಿದರು. 

ಪ್ರತಿಯೊಬ್ಬರೂ ಯೋಗ ಮಾಡುವುದರಿಂದ ಏಕಾಗ್ರತೆ ಸಾಧಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಸಾಧನೆಯ ಅವಶ್ಯಕತೆ ಹೆಚ್ಚಿದೆ. ನಾವು ಉಪಯೋಗಿಸುವ ಆಹಾರ, ನೀರು, ಉಸಿರಾಡುವ ಗಾಳಿ ಎಲ್ಲವೂ ಮಲಿನಗೊಂಡಿದೆ. ಇದರಿಂದ ರೋಗ ರುಜಿನಗಳಿಂದ ಬಳಲುವಂತಾಗಿದೆ. 

ಇವುಗಳಿಂದ ಸಾಧ್ಯವಿರುವಷ್ಟು ವಿಮುಕ್ತರಾಗಿ ಆರೋಗ್ಯವಂತರಾಗಿ, ದೀರ್ಘಾಯುಗಳಾಗಿ ಬದುಕಿ ಬಾಳಲು ಯೋಗಾಭ್ಯಾಸ, ಪ್ರಕೃತಿ ಚಿಕಿತ್ಸೆ ಅಗತ್ಯ. ಯೋಗಾಸನ ಮನುಷ್ಯನ ಶರೀರದ ರಚನಾ ಶಾಸ್ತ್ರದ ಆಧಾರದ ಮೇಲೆ ನಿಂತಿದೆ.

ಯೋಗಾಸನವೆಂಬುದು ಜಗತ್ತಿಗೆ ಭಾರತದ ದೊಡ್ಡ ಕೊಡುಗೆ. ಯೋಗಾಭ್ಯಾಸದಿಂದ ಜೀರ್ಣಾಂಗಗಳ ಶಕ್ತಿ ವೃದ್ಧಿಗೊಳ್ಳುತ್ತದೆ. ಇದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಶರೀರ ಸ್ವಾಸ್ಥ್ಯಕ್ಕಾಗಿ ಕೆಲವು ಯೋಗಾಸನಗಳನ್ನಾದರೂ ನಮ್ಮ ನಿತ್ಯ ಜೀವನದಲ್ಲಿ ಆಚರಣೆಯಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಹೇಳಿದರು.

Advertisement

ಮುಖ್ಯ ಆಯುಷ್‌ ಅಧಿಕಾರಿ ಸಿದ್ಧೇಶ್ವರ, ಯೋಗ ಗುರುಗಳಾದ ರಾಘವೇಂದ್ರ, ಸೋಮಣ್ಣ, ಹೇಮಾವತಿ, ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಇದ್ದರು.

ಬದಲಾಗುತ್ತಿರುವ ಆಧುನಿಕ ಆಹಾರ ಪದ್ಧತಿಯಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ.
ಯೋಗ ಮಾಡುವುದರಿಂದ ಕಾಯಿಲೆಯಿಂದ ದೂರ ಇರಬಹುದು. ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಪ್ರತಿ ದಿನ ಯೋಗ ಮಾಡುವುದನ್ನು ಕಲಿಯಬೇಕು. 
 ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next