Advertisement

ಏರ್ ಇಂಡಿಯಾ: ಯಾರೂ ಕೊಳ್ಳದಿದ್ರೆ ಮುಚ್ಚುವುದೊಂದೇ ದಾರಿ!

09:44 AM Nov 28, 2019 | Team Udayavani |

ಹೊಸದಿಲ್ಲಿ: ನಷ್ಟದ ಹಾದಿಯಲ್ಲಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸದಿದ್ದರೆ ಮುಚ್ಚಬೇಕಾದ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.  ಸರಕಾರ ಬಿಡ್‌ಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಸಚಿವರು ಮೇಲ್ಮನೆಗೆ ಮಾಹಿತಿ ನೀಡಿದರು.

Advertisement

ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಏರ್‌ ಇಂಡಿಯಾದ ನೌಕರರ ಹಿತಾಸಕ್ತಿಗಳನ್ನು ರಕ್ಷಿಸಲಾಗುವುದು. ಖಾಸಗೀಕರಣವಾಗುವ ವೇಳೆ ಯಾವುದೇ ಉದ್ಯೋಗ ನಷ್ಟವಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಉದ್ಯೋಗಿಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಅವರ ಆರೋಗ್ಯ ರಕ್ಷಣೆ ಮೊದಲಾದವುಗಳನ್ನು ಗಣನೆಗೆ ತೆಗೆದುಕೊಂಡು ಉದ್ಯೋಗಿಗಳಿಗೆ ಅನುಕೂಲವಾದ ರೀತಿಯಲ್ಲಿ ನಾವು ಯೋಜನೆ ರೂಪಿಸಲಾಗುತ್ತದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಏರ್‌ ಇಂಡಿಯಾದ ಹಲವು ಪೈಲಟ್‌ಗಳು ತಮ್ಮ ಸಂಬಳವನ್ನು ಸಮಯಕ್ಕೆ ಸರಿಯಾಗಿ ನೀಡದ ಕಾರಣ ಸಂಸ್ಥೆಯಿಂದ ಹೊರಹೋಗುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಏರ್‌ ಇಂಡಿಯಾ ಪೈಲಟ್‌ಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಅವರ ವೇತನವೂ ಉತ್ತಮವಾಗಿದೆ ಎಂದು ಪುರಿ ಹೇಳಿದರು.

ಏರ್‌ ಇಂಡಿಯಾ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ವಿವಿಧ ಉದ್ಯೋಗಿಗಳ ಶೇ. 25ರಷ್ಟು ವೇತನವನ್ನು ತಡೆಹಿಡಿಯಲಾಗಿದೆ. ಖಾಸಗೀಕರಣ ಅಥವಾ ಹೂಡಿಕೆ ಪೂರ್ಣಗೊಳ್ಳುವ ಮೊದಲು ಈ ಶೇಕಡಾ 25ರಷ್ಟು ವೇತನವನ್ನು ಎಲ್ಲಾ ಉದ್ಯೋಗಿಗಳಿಗೆ ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನವೆಂಬರ್‌ 17ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರು 2020ರ ಮಾರ್ಚ್‌ ವೇಳೆಗೆ ಏರ್‌ ಇಂಡಿಯಾವನ್ನು ಖಾಸಗೀಕರಣ ಮಾಡಲಿದ್ದೇವೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next