Advertisement

ಅಶಿಸ್ತು ತಡೆಯಲು ದಂಡದ ದಾರಿ ಹಿಡಿದ ಏರ್‌ ಇಂಡಿಯಾ!

03:45 AM Apr 18, 2017 | Team Udayavani |

ವಿಮಾನ ವಿಳಂಬಕ್ಕೆ ಕಾರಣರಾದರೆ 5 ಲಕ್ಷದಿಂದ 15 ಲಕ್ಷ ರೂ. ದಂಡ

Advertisement

ನವದೆಹಲಿ: ವಿಮಾನದಲ್ಲಿ ಅಶಿಸ್ತಿನಿಂದ ವರ್ತಿಸಿ, ವಿಮಾನ ಯಾನ ವಿಳಂಬಕ್ಕೆ ಕಾರಣರಾಗುವ ಪ್ರವೃತ್ತಿಯ ಪ್ರಯಾಣಿರಿಗೆ ಇನ್ನು 5 ಲಕ್ಷದಿಂದ 15 ಲಕ್ಷ ರೂ. ದಂಡ ವಿಧಿಸಲು ಏರ್‌ ಇಂಡಿಯಾ ನಿರ್ಧರಿಸಿದೆ.

ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್‌ ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದು, ವಿಮಾನ ಒಂದು ತಾಸು ತಡವಾಗಿ ಹೊರಡಲು ಕಾರಣವಾದ ಪ್ರಕರಣದಿಂದ ಎಚ್ಚೆತ್ತಿರುವ ಏರ್‌ ಇಂಡಿಯಾ, ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತು ತಡೆಯುವ ನಿಟ್ಟಿನಲ್ಲಿ ಕೆಲವೊಂದು ಶಿಸ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ ವಿಮಾನಗಳಲ್ಲಿ ಅಶಿಸ್ತು ತೋರುವ, ಆಮೂಲಕ ವಿಮಾನದ ವಿಳಂಬಕ್ಕೆ ಎಡೆಮಾಡಿಕೊಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಇಂಥ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಏರ್‌ ಇಂಡಿಯಾ ತಿಳಿಸಿದೆ.
ಈ ಸಂಬಂಧ ದಂಡ ಪ್ರಮಾಣ ನಿಗದಿಗೊಳಿಸಿರುವ ಸಂಸ್ಥೆ, ಒಂದು ತಾಸು ವಿಳಂಬಕ್ಕೆ ಕಾರಣರಾದವರಿಗೆ 5 ಲಕ್ಷ ರೂ. 1ರಿಂದ 2 ಗಂಟೆ ವಿಳಂಬಕ್ಕೆ ಕಾರಣರಾದರೆ 10 ಲಕ್ಷ ಹಾಗೂ ಎರಡು ತಾಸಿಗಿಂತಲೂ ಹೆಚ್ಚಿನ ವಿಳಂಬಕ್ಕೆ ಕಾರಣರಾಗುವ ಪ್ರಯಾಣಿಕರಿಗೆ 15 ಲಕ್ಷ ರೂ. ದಂಡ ನಿಗದಿಯಾಗಿದೆ.

ಹೆಚ್ಚಿದ ನಿಷೇಧ: ಚಪ್ಪಲಿ ಸಂಸದ ರವೀಂದ್ರ ಗಾಯಕ್ವಾಡ್‌ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿದಂತೆಯೇ ಭಾರತದ ವಿಮಾನಯಾನ ಸಂಸ್ಥೆಗಳು ಇತರ ಪ್ರಯಾಣಿಕರ ವಿರುದ್ಧವೂ ನಿಷೇಧ ಅಸ್ತ್ರ ಪ್ರಯೋಗಿಸಿವೆ. 2016ರ ಏಪ್ರಿಲ್‌ನಿಂದ 2017ರ ಫೆಬ್ರವರಿ ನಡುವೆ ಸುಮಾರು 18,242 ಪ್ರಯಾಣಿಕರು ಏರ್‌ಲೈನ್‌ಗಳಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷದ ಇದೇ ವಧಿಯಲ್ಲಿನ ಸಂಖ್ಯೆಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ 10,561 ಹೆಚ್ಚುವರಿ ಪ್ಯಾಣಿಕರು ನಿಷೇಧ ಪಟ್ಟಿ ಸೇರಿದ್ದಾರೆ. 2016-17ರ ಏರ್‌ ಇಂಡಿಯಾ ಟ್ರಾಫಿಕ್‌ ಡಾಟಾ ಪ್ರಕಾರ, ನಿಷೇಧ ಪಟ್ಟಿ ಸೇರಿದ ಪ್ರಯಾಣಿಕರ ಪೈಕಿ ಶೇ.80 ಮಂದಿ ಜೆಟ್‌ ಏರ್‌ವೆàಸ್‌ನಿಂದ ಹಾಗೂ ಶೇ.14 ಪ್ರಯಾಣಿಕರು ಏರ್‌ ಇಂಡಿಯಾದಿಂದ ಕಪ್ಪು ಪಟ್ಟಿ ಸೇರಿದ್ದಾರೆ.

ಐವರು ಗಾಯಕ್ವಾಡ್‌
ಮಾರ್ಚ್‌ 23ರಂದು ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದು ಸುದ್ದಿಯಾಗಿದ್ದ ರವೀಂದ್ರ ಗಾಯಕ್ವಾಡ್‌, ಆನಂತರ ಮಾಧ್ಯಮಗಳು ಮತ್ತು ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಮೊನ್ನೆಯಷ್ಟೆ ಸೆಲ್ಫಿಗಾಗಿ ತಮ್ಮನ್ನೇ ಹೋಲುವ “ಡುಪ್ಲಿಕೇಟ್‌ ಗಾಯಕ್ವಾಡ್‌’ನನ್ನು ನೇಮಿಸಿಕೊಂಡು ಸುದ್ದಿಯಾಗಿದ್ದ ಶಿವಸೇನೆ ಸಂಸದ, ಪ್ರಸ್ತುತ ತಮ್ಮನ್ನೇ ಹೋಲುವ ಐವರು ಅಭಿಮಾನಿಗಳ ಬೆಂಬಲ ಪಡೆದಿದ್ದಾರೆ. ಈ ಐದೂ ಮಂದಿ ನೋಡಲು ಥೇಟ್‌ ಗಾಯಕ್ವಾಡ್‌ ರೀತಿಯೇ ಇದ್ದು, ಅವರಂತೆಯೇ ಬಟ್ಟೆ ಧರಿಸುತ್ತಾರೆ. ಇಂಥ ಒಬ್ಬ ಡೂಪ್ಲಿಕೇಟ್‌ ಗಾಯಕ್ವಾಡ್‌ನ‌ನ್ನು ನೋಡಿ ಸಂಸದ, ನಟ ಶತ್ರುಘ್ನ ಸಿನ್ಹಾ ಕೂಡ ಮೋಸ ಹೋಗಿದ್ದಾರೆ.

Advertisement

18,242
2016ರ ಏಪ್ರಿಲ್‌ನಿಂದ 2017ರ ಫೆಬ್ರವರಿ ನಡುವೆ ಕಪ್ಪು ಪಟ್ಟಿ ಸೇರಿದ ಪ್ರಯಾಣಿಕರು.

10,561
ಕಳೆದ ವರ್ಷಕ್ಕೆ ಹೋಲಿಸಿದರೆ ನಿಷೇಧ ಪಟ್ಟಿ ಸೇರಿದ ಹೆಚ್ಚುವರಿ ಪ್ರಯಾಣಿಕರ ಸಂಖ್ಯೆ.

Advertisement

Udayavani is now on Telegram. Click here to join our channel and stay updated with the latest news.

Next