Advertisement

ಹಿರಿಯ ನಾಗರಿಕರಿಗೆ ಏರ್‌ ಇಂಡಿಯಾ ಪ್ರಯಾಣ ದರದಲ್ಲಿ ಶೇ. 50 ರಿಯಾಯಿತಿ: ಇಲ್ಲಿದೆ ಮಾಹಿತಿ

09:52 AM Nov 12, 2019 | Hari Prasad |

ಮುಂಬಯಿ: ಭಾರತದ ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ನೀಡುವ ಕೊಡುಗೆಯನ್ನು ಏರ್‌ ಇಂಡಿಯಾ ಸಂಸ್ಥೆ ಪ್ರಕಟಿಸಿದೆ. ಏರ್‌ ಇಂಡಿಯಾದ ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು ಇನ್ನು ಮುಂದೆ ನಿಗದಿತ ಟಿಕೆಟ್‌ ದರದ ಅರ್ಧದಷ್ಟು ಮೊತ್ತವನ್ನು ಪಾವತಿಸಿದರೆ ಸಾಕು ಎಂದು ಸಂಸ್ಥೆ ತಿಳಿಸಿದೆ. ಹಾಗಾದರೆ ಯೋಜನೆಯ ಪ್ರಯೋಜನ ಪಡೆಯಲು ಹಿರಿಯ ನಾಗರಿಕರು ಮಾಡಬೇಕಾದದ್ದೇನು? ಏನೆಲ್ಲಾ ದಾಖಲೆ ಬೇಕು? ಎಂಬಿತ್ಯಾದಿ ಇಲ್ಲಿದೆ ಮಾಹಿತಿ.

Advertisement

ಭಾರತದ ಪ್ರಜೆ ಆಗಿರಬೇಕು
ಈ ಯೋಜನೆಯನ್ನು ಪಡೆಯಬಯಸುವ ನಾಗರಿಕರು ಭಾರತದ ಪ್ರಜೆಯಾಗಿದ್ದು, ದೇಶದ ಖಾಯಂ ನಿವಾಸಿ ಆಗಿರಬೇಕು. ಪ್ರಯಾಣದ ದಿನಾಂಕದ ವೇಳೆಗೆ 60 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರು ಈ ಸೌಲಭ್ಯ ಬಳಸಿಕೊಳ್ಳಲು ಅರ್ಹರು.

ಯಾವೆಲ್ಲಾ ದಾಖಲೆಗಳಿರಬೇಕು?
ಮತದಾರರ ಗುರುತಿನ ಚೀಟಿ (ವೋಟರ್‌ ಐಡಿ ಕಾರ್ಡ್‌), ಪಾಸ್‌ ಪೋರ್ಟ್‌, ಚಾಲನಾ ಪರವಾನಿಗಿ (ಡ್ರೈವಿಂಗ್‌ ಲೈಸೆನ್ಸ್‌) ಏರ್‌ ಇಂಡಿಯಾ ನೀಡಿದ ಹಿರಿಯ ನಾಗರಿಕರ ಗುರುತಿನ ಚೀಟಿ ಮತ್ತು ವಯಸ್ಸಿನ ದಾಖಲೆಯನ್ನು ಖಚಿತಪಡಿಸುವ ಅಧಿಕೃತವಾದ ಯಾವುದಾದರೂ ಒಂದು ಗುರುತಿನ ಚೀಟಿ ಹೊಂದಿರಬೇಕು.

ದೇಶದ ಒಳಗೆ ಮಾತ್ರ
ಈ ಸೌಲಭ್ಯದಡಿಯಲ್ಲಿ ಭಾರತದ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿದ್ದು, ಹಿರಿಯ ನಾಗರಿಕರು ಟಿಕೆಟ್‌ನ ನಿಗದಿತ ಬೆಲೆಯ ಅರ್ಧದಷ್ಟು ಬೆಲೆ ಪಾವತಿಸಿ ಪ್ರಯಾಣಿಸಬಹುದು.

ಮುಂಗಡ ಕಾಯ್ದಿರಿಸಬೇಕು
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಇಚ್ಚಿಸುವ ಹಿರಿಯ ನಾಗರಿಕರು ಪ್ರಯಾಣ ಮಾಡ ಬಯಸುವ ಏಳು ದಿನಗಳ ಮುಂಗಡವೇ ಟಿಕೆಟ್‌ ಖರೀದಿಸಬೇಕು. ಟಿಕೆಟ್‌ ವಿತರಿಸಿದ ದಿನಾಂಕದಿಂದ ಒಂದು ವರ್ಷದ ವರೆಗೆ ಈ ಟಿಕೆಟ್‌ ಮಾನ್ಯತೆ ಹೊಂದಿರುತ್ತದೆ.

Advertisement

ಷರತ್ತುಗಳೇನು?
ಚೆಕ್‌ ಇನ್‌ ಅಥವಾ ಬೋರ್ಡಿಂಗ್‌ ಗೇಟ್‌ ಬಳಿ ಸೂಕ್ತ ಗುರುತಿನ ಚೀಟಿ ಅಥವಾ ದಾಖಲೆ ಇಲ್ಲದಿದ್ದರೆ ಪಾವತಿ ಮಾಡಿದ ಅಷ್ಟು ಮೊತ್ತವನ್ನು ಸಂಸ್ಥೆ ತನ್ನ ವಶಕ್ಕೆ ಪಡೆದುಕೊಳ್ಳತ್ತದೆ. ವಜಾ ಮಾಡಿಕೊಂಡ ಮೊತ್ತವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ತೆರಿಗೆ ಹಣವನ್ನು ಮಾತ್ರ ನೀಡಲಾಗುತ್ತದೆ. ಚೆಕ್‌ ಇನ್‌ ಮತ್ತು ಬೋರ್ಡಿಂಗ್‌ ದ್ವಾರದ ಬಳಿ ಗುರುತಿನ ದಾಖಲೆ ತೋರಿಸದಿದ್ದರೆ ವಿಮಾನ ಏರುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಏರ್‌ ಇಂಡಿಯಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next