ನವದೆಹಲಿ: ಟಾಟಾ ಸಮೂಹ ಸಂಸ್ಥೆಯ ಭಾಗವಾಗಿರುವ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಭಾರಿ ದಂಡ ವಿಧಿಸಲಾಗಿದೆ.
ಕೆಲವು ದೀರ್ಘಾವಧಿಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಿಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 1.10 ಕೋಟಿ ರೂಪಾಯಿ ದಂಡ ವಿಧಿಸಿದೆ. ವಿಮಾನಯಾನ ನಿಯಂತ್ರಕ ಡಿಜಿಸಿಎ ಬುಧವಾರ ನೀಡಿದ ಹೇಳಿಕೆಯ ಪ್ರಕಾರ, ಏರ್‌ಲೈನ್ ಉದ್ಯೋಗಿಯಿಂದ ಸ್ವಯಂಪ್ರೇರಿತ ಸುರಕ್ಷತಾ ವರದಿಯನ್ನು ಸ್ವೀಕರಿಸಿದ ನಂತರ ವಿವರವಾದ ತನಿಖೆ ನಡೆಸಿತು. ಕೆಲವು ಪ್ರಮುಖ ದೀರ್ಘ-ಪ್ರಯಾಣದ ಮಾರ್ಗಗಳಲ್ಲಿ ಏರ್ ಇಂಡಿಯಾ ನಿರ್ವಹಿಸುವ ವಿಮಾನಗಳಲ್ಲಿ ಭದ್ರತಾ ಉಲ್ಲಂಘನೆಗಳನ್ನು ಅದು ಆರೋಪಿಸಿದೆ.
ಡಿಜಿಸಿಎ ನಡೆಸಿದ ಪ್ರಾಥಮಿಕ ತನಿಖೆಯಿಂದ ಏರ್‌ಲೈನ್ ನಲ್ಲಿ ಭದ್ರತಾ ಉಲ್ಲಂಘನೆಯಾಗಿರುವುದು ದೃಢಪಟ್ಟಿದ್ದು ಇದಾದ ಬಳಿಕ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಸುರಕ್ಷತಾ ವರದಿಯು ಏರ್ ಇಂಡಿಯಾ ನಿರ್ವಹಿಸುವ ಗುತ್ತಿಗೆಯ ವಿಮಾನಗಳಿಗೆ ಸಂಬಂಧಿಸಿದೆ. ಗುತ್ತಿಗೆ ಪಡೆದ ವಿಮಾನದ ಕಾರ್ಯಾಚರಣೆಯು ನಿಯಂತ್ರಣ/ಒಇಎಂ ಕಾರ್ಯಕ್ಷಮತೆಯ ಮಿತಿಗಳಿಗೆ ಅನುಗುಣವಾಗಿಲ್ಲದ ಕಾರಣ, ಡಿಜಿಸಿಎ ಕ್ರಮ ಕೈಗೊಂಡು ಏರ್ ಇಂಡಿಯಾಗೆ 1.10 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಏರ್ ಇಂಡಿಯಾದ B777 ಕಮಾಂಡರ್ ಆಗಿದ್ದ ಪೈಲಟ್ ಕಳೆದ ವರ್ಷ ಅಕ್ಟೋಬರ್ 29 ರಂದು ಈ ಬಗ್ಗೆ ದೂರು ನೀಡಿದ್ದರು. ದೂರಿನ ಕುರಿತು ಸಮಗ್ರ ತನಿಖೆ ನಡೆಸಿದಾಗ ವಿಮಾನಯಾನ ಸಂಸ್ಥೆ ನಿಯಮಗಳನ್ನು ಪಾಲಿಸಿಲ್ಲ ಎಂದು ತಿಳಿದುಬಂದಿದೆ ಎಂದು ಡಿಜಿಸಿಎ ತಿಳಿಸಿದೆ.
ಇತ್ತೀಚೆಗೆ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಗೆ 1.20 ಕೋಟಿ ರೂ. ದಂಡ ವಿಧಿಸಲಾಗಿತ್ತು. ಮುಂಬೈ ವಿಮಾನ ನಿಲ್ದಾಣದ ರನ್ ವೇಯಲ್ಲೇ ಕುಳಿತು ಪ್ರಯಾಣಿಕರು ಆಹಾರ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇಂಡಿಗೋ ಜೊತೆಗೆ ಮುಂಬೈ ವಿಮಾನ ನಿಲ್ದಾಣಕ್ಕೂ 90 ಲಕ್ಷ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: INDIA ಒಕ್ಕೂಟದಲ್ಲಿ ಒಡಕು… ಪಶ್ಚಿಮ ಬಂಗಾಳದಲ್ಲಿ ಏಕಾಂಗಿ ಸ್ಪರ್ಧೆ: ಮಮತಾ ಘೋಷಣೆ