ಹೊಸದಿಲ್ಲಿ: ಭಾರತೀಯ ವಾಯುಪಡೆಯ ಅತ್ಯಂತ ಪ್ರಮುಖ ಯುದ್ಧ ವಿಮಾನ ಮಿಗ್-29 ಈಗ ಮಹತ್ವದ ಸುಧಾರಣೆ ಕಂಡಿದೆ. ವಾಯುಪಡೆ ದಿನವನ್ನು ಸೋಮವಾರ ಆಚರಿಸಲಾಗುವ ಹಿನ್ನೆಲೆ ಯಲ್ಲಿ ಸುಧಾರಿತ ಮಿಗ್-29 ಮಹತ್ವದ ಪಾತ್ರ ವಹಿಸಲಿದೆ. ಯುದ್ಧ ವಿಮಾನಗಳ ಅಭಾವ ಎದುರಿಸುತ್ತಿರುವ ಐಎಎಫ್ಗೆ ಇದು ವರವಾಗಿ ಪರಿಣಮಿಸಿದೆ.
ಯುದ್ಧ ವಿಮಾನಗಳ ಕೊರತೆಯನ್ನು ಎದುರಿಸುತ್ತಿದ್ದ ಭಾರತೀಯ ವಾಯುಪಡೆಗೆ ಈ ಸುಧಾರಿತ ಮಿಗ್ -29 ಅತ್ಯಂತ ಪ್ರಮುಖವಾಗಿದ್ದು, ಹಾರಾಡುತ್ತಿರುವಾಗಲೇ ಇಂಧನ ಮರುಪೂರಣ ಸಾಧ್ಯವಾಗಲಿದೆ. ರಷ್ಯಾದ ಇದು ಹಲವು ದಿಕ್ಕುಗಳಿಗೆ ಶಸ್ತ್ರ ಉಡಾವಣೆ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ಅದಂಪುರ ವಾಯು ನೆಲೆ ಯಲ್ಲಿನ ಫ್ಲೈಟ್ ಲೆಫ್ಟಿನೆಂಟ್ ಕರಣ್ ಕೋಹ್ಲಿ ತಿಳಿಸಿದರು.
ಕಳೆದ ವಾರ ಸುಧಾರಿತ ಮಿಗ್-29 ಅನ್ನು ಪ್ರದರ್ಶಿಸಲಾಗಿತ್ತು. ಸದ್ಯ ಲಭ್ಯವಿರುವ ಮಿಗ್ ವಿಮಾನಗಳನ್ನು 1980ರ ವೇಳೆಗೆ ತುರ್ತು ಸನ್ನಿವೇಶದಲ್ಲಿ ಖರೀದಿ ಮಾಡಲಾಗಿತ್ತು. ಇದರಿಂದಾಗಿ ಒಂದು ವೇಳೆ ಪಾಕ್ ಹಾಗೂ ಚೀನ ಒಟ್ಟಿಗೆ ಯುದ್ಧಕ್ಕೆ ಬಂದರೂ ಸೂಕ್ತ ಪ್ರತಿಕ್ರಿಯೆಯನ್ನು ಭಾರತ ನೀಡಬಹುದಾಗಿದೆ. ಸದ್ಯ ವಾಯುಪಡೆ ಮೂರು ಸ್ಕ್ವಾಡ್ರನ್ ಮಿಗ್ 29 ಹೊಂದಿದೆ. ಒಂದೊಂದು ಸ್ಕ್ವಾಡ್ರನ್‌ನಲ್ಲೂ 16-18 ಯುದ್ಧ ವಿಮಾನಗಳಿವೆ. ಈ ಪೈಕಿ ಅದಂಪುರ ಸೇನಾನೆಲೆಯಲ್ಲಿ ಎರಡು ಸ್ಕ್ವಾಡ್ರನ್ ಇವೆ. ಇತ್ತೀಚಿನ ಹಲವು ಸೌಲಭ್ಯಗಳು, ಕಾಕ್‌ಪಿಟ್‌ನಲ್ಲಿ ಡಿಜಿಟಲ್ ಸ್ಕ್ರೀನ್‌ಗಳು ಹಾಗೂ ಗ್ಲಾಸ್ ಕಾಕ್‌ಪಿಟ್ ಸಹಿತ ಇಡೀ ಯುದ್ಧ ವಿಮಾನ ಈಗ ಹೊಸದಾಗಿ ಕಂಗೊಳಿಸುತ್ತಿದೆ.
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆ ಅದಂಪುರ ನೌಕಾನೆಲೆ ಮಹತ್ವದ ಪಾತ್ರ ವಹಿಸಿತ್ತು. 1965ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲೂ, ಪಾಕಿಸ್ಥಾನದ ದುಸ್ಸಾಹಸಗಳಿಗೆ ಅಂದಪುರ ನೌಕಾನೆಲೆ ತಕ್ಕ ಪ್ರತ್ಯುತ್ತರ ನೀಡಿತ್ತು. ಹೀಗಾಗಿ ಶತ್ರು ದೇಶ ಭಾರೀ ನಷ್ಟು ಅನುಭವಿಸಿತ್ತು.
ಏನಿದರ ವೈಶಿಷ್ಟ?
ಹಾರಾಟದ ವೇಳೆಯೂ ಇಂಧನ ಮರುಪೂರಣ ವ್ಯವಸ್ಥೆ
ಮಲ್ಟಿ ಫಂಕ್ಷನಲ್ ಡಿಸ್‌ಪ್ಲೇ ಸ್ಕ್ರೀನ್
ಡಿಜಿಟಲ್ ಸ್ಕ್ರೀನ್ ಹೊಂದಿರುವ ಗ್ಲಾಸ್ ಕಾಕ್‌ಪಿಟ್
ಶತ್ರು ದೇಶದ ವಿಮಾನ ಭಾರತದ ವಾಯುಗಡಿ ದಾಟಿದ 5 ನಿಮಿಷಗಳೊಳಗೆ ಟೇಕ್ ಆಫ್ ಆಗಿ, ಅದನ್ನು ನಾಶ ಮಾಡುವ ಸಾಮರ್ಥ್ಯ
ಪಾಕ್, ಚೀನ ಒಟ್ಟಿಗೆ ಯುದ್ಧಕ್ಕೆ ಬಂದರೂ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ