Advertisement
ಫೆಬ್ರವರಿ 26ರ ದಟ್ಟ ಕತ್ತಲು ಕವಿದಸಮಯದಲ್ಲಿ, ಗೂಬೆಗಳೂ ಗಾಢನಿದ್ರೆಯಲ್ಲಿದ್ದ ಅವಧಿಯಲ್ಲಿ ಬಾಲಕೋಟ್, ಮುಝಫರಾಬಾದ್ ಮತ್ತು ಚಕೋಥಿ ನಗರಗಳು ಬಾಂಬ್ ದಾಳಿಗೆ ನಡುಗಿಹೋದವು. ಅವುಗಳ ಮೇಲೆ ಸುರಿದ ಬಾಂಬಿನ ಮಳೆಯು ಜೈಶ್ ಎ ಮೊಹಮ್ಮದ್‌ನ ಕಮಾಂಡರ್‌ಗಳು, ತರಬೇತುದಾರರು ಮತ್ತು ಜಿಹಾದಿಗಳನ್ನು ಭಸ್ಮ ಮಾಡಿದವು. ಭಾರತೀಯ ವಾಯುಪಡೆಯ 12 ಮಿರಾಜ್-2000 ಯುದ್ಧವಿಮಾನಗಳು, ಮೂರು ಅಲೆಗಳಲ್ಲಿ ಬಾಲ್‌ಕೋಟ್ ಜಿಲ್ಲೆಯಲ್ಲಿದ್ದ ಜೈಶ್ ಎ ಮೊಹಮ್ಮದ್‌ನ ಅತಿದೊಡ್ಡ ಉಗ್ರ ತರಬೇತಿ ಪ್ರದೇಶದ ಮೇಲೆ ದಾಳಿ ಮಾಡಿದವು. ಈ ಕ್ಯಾಂಪ್ ಅನ್ನು ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್‌ನ ಭಾಮೈದ ನಡೆಸುತ್ತಿದ್ದ ಎನ್ನಲಾಗುತ್ತದೆ.
Related Articles
Advertisement
ಆದಾಗ್ಯೂ ಭಾರತೀಯ ವಾಯುಪಡೆಗೆ ಶತ್ರುಗಳ ಮೇಲೆ ತ್ವರಿತವಾಗಿ ಮತ್ತು ನಿಖರವಾಗಿ ದಾಳಿ ಮಾಡಿ ಶಿಕ್ಷಿಸುವ ಸಾಮರ್ಥ್ಯ ಇದ್ದರೂ, ಅಂದಿನ ಸರ್ಕಾರ ಮಾತ್ರ “ಎಚ್ಚರಿಕೆ’ ವಹಿಸಿ ಸುಮ್ಮನಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಯ ಪ್ರದರ್ಶನದ ಅರಿವಿದ್ದರೂ, ಸರ್ಕಾರ ಹಿಂದೇಟು ಹಾಕಿತು. ಬಹುಶಃ ವಾಯುದಾಳಿ ನಡೆಸಿದರೆ ಪರಿಸ್ಥಿತಿ ಉಲ್ಬಣಿಸಬಹುದು ಮತ್ತು ನಾಗರಿಕರು ಮತ್ತವರ ಆಸ್ತಿಪಾಸ್ತಿಗಳಿಗೆ ಹಾನಿಯಾಗಬಹುದು ಎಂದು ಭಾವಿಸಿ ಅದು ಹೀಗೆ ನಿರ್ಧರಿಸಿರುವ ಸಾಧ್ಯತೆ ಇದೆ. ಆದರೆ ಇಂದು, ಭಾರತೀಯ ವಾಯುಪಡೆಯ ತ್ವರಿತ ಪ್ರತಿಕ್ರಿಯೆ, ನಿಖರ ದಾಳಿಯ ಸಾಮರ್ಥ್ಯ ಸಾಬೀತಾಗಿದೆ.
ಈಗ ವಾಯುದಾಳಿ ಎನ್ನುವುದನ್ನು ರಾಷ್ಟ್ರವೊಂದರ ಇಚ್ಛಾಶಕ್ತಿಯನ್ನು ಸಾದರ ಪಡಿಸುವ ಪ್ರಬಲ ವಿಧಾನ ಎಂದು ಗುರುತಿಸಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಭಾರತೀಯ ವಾಯುಪಡೆಯು ಹಲವು ಗಂಭೀರ ವಿಳಂಬಗಳು ಮತ್ತು ಯುದ್ಧವಿಮಾನದ ತೀವ್ರ ಕೊರತೆಯ ಹೊರತಾಗಿಯೂ ನಾವೀನ್ಯತೆ, ಸುಧಾರಣೆ ಮತ್ತು ತರಬೇತಿಯ ಮೂಲಕ ವ್ಯವಸ್ಥಿತವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ. ಬಾಲಕೋಟ್ ಉಗ್ರ ಕ್ಯಾಂಪ್ ಮೇಲೆ ನಡೆಸಲಾದ ಪೂರ್ವನಿಯೋಜಿತ ದಾಳಿಯನ್ನು ಅದ್ಭುತವಾಗಿ ಸಂಯೋಜಿಸಲಾಗಿತ್ತು. ಇದನ್ನು “ಕಾರ್ಯಾಚರಣೆ’ ಎನ್ನುವುದಕ್ಕಿಂತ “ಸಂಯೋಜನೆ’ ಎನ್ನುವುದೇ ಸರಿ ಎಂದು ನನಗನಿಸುತ್ತದೆ. ಏಕೆಂದರೆ, ಮಂಗಳವಾರದ ಘಟನೆಯ ಹಿಂದೆ ಸೂಕ್ಷ್ಮ ಗುಪ್ತಚರ ಮಾಹಿತಿಯ ಸಂಗ್ರಹ, ಗಾಢ ವಿಶ್ಲೇಷಣೆ, ಬೆಂಬಲ ಪಡೆಯ ನಿಯೋಜನೆ, ಯುದ್ಧವಿಮಾನ, ಶಸ್ತಾಸ್ತ್ರ ಮತ್ತು ಸೆನ್ಸರ್‌ಗಳ ಸಿದ್ಧಪಡಿಸುವಿಕೆ, ಏರಿಯಲ್ ಟ್ಯಾಂಕರ್‌ಗಳು, ಸಂವಹನ ಕೇಂದ್ರಗಳು ನಡುವಿನ ತಾಳಮೇಳವೂ ಮುಖ್ಯವಾಗಿ ಇರುತ್ತದೆ. ಈ ದಾಳಿಯಲ್ಲಿ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಪಾಲ್ಗೊಂಡ ತಂಡಗಳನ್ನು ಸಜ್ಜುಗೊಳಿಸುವುದರ ಹಿಂದೆ ಅದಮ್ಯ ಪ್ರಯತ್ನ ಮತ್ತು ಹೊಂದಾಣಿಕೆ ಅಗತ್ಯವಾಗುತ್ತದೆ. ಒಂದು ತಪ್ಪು ಸ್ವರ ಹೊರಹೊಮ್ಮಿದರೂ ಸಂಗೀತ ಹಾಳಾಗುವ ಸಾಧ್ಯತೆ ಇರುತ್ತದೆ.
ಆದರೆ ಇಲ್ಲೊಂದು ಎಚ್ಚರಿಕೆಯನ್ನು ನೀಡಲೇಬೇಕು. ಮಿಲಿಟರಿಯೇನೋ ಶತ್ರುಗಳ ಮೇಲೆ “ದಾಳಿ ಮಾಡೋಣ’ ಎಂದು ಸುಲಭವಾಗಿ ಯೋಜನೆ ಎದುರಿಡಬಹುದು. ಆದರೆ ಸರ್ಕಾರದ ಮೇಲೆ ಅದಕ್ಕಿಂತಲೂ ಬೃಹತ್ ಜವಾಬ್ದಾರಿ ಇರು ತ್ತದೆ. ಅಂತಿಮ ಫಲಿತಾಂಶದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇರಬೇಕು(ಮಿಲಿಟರಿ ಮತ್ತು ರಾಜಕೀಯದ ದೃಷ್ಟಿಕೋನ ದಿಂದ). ಫಲಿತಾಂಶವೆಂದಿಗೂ ಕರಾರುವಾರ್ ಆಗಿ ಇರುವುದಿಲ್ಲ. ಪ್ರಯತ್ನವೆಲ್ಲ ದುರಂತವಾಗಿ ಬದಲಾಗಬಹುದು. ಅನೇಕ ಪ್ರಾಣಗಳು ಬಲಿಯಾಗಬಹುದು. ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಬಹುದು. ನಾಗರಿಕ ಸರ್ಕಾರವೊಂದಕ್ಕೆ ಮಿಲಿಟರಿ ಕಾರ್ಯಾಚರಣೆಯೊಂದು ಯಶಸ್ವಿ ಆಗಿಯೇ ತೀರುತ್ತದೆ ಎಂದು ಊಹಿಸಲು ಮತ್ತು ಯಶಸ್ವಿಯಾಗೇ ತೀರುತ್ತೇವೆ ಎಂಬ ಪೂರ್ಣ ಕಾನ್ಫಿಡೆನ್ಸ್ ಹೊಂದಲು ಸಾಧ್ಯವಿಲ್ಲ. ಇಷ್ಟಾದರೂ ರಾಜಕಾರಣಿಗಳು ಒಂದು ನಿರ್ಧಾರಕ್ಕೆ ಬಂದುಬಿಡುತ್ತಾರೆ ಮತ್ತು ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಕ್ಯಾಬಿನೆಟ್ ಸದಸ್ಯರು ಅಥವಾ ಪ್ರಧಾನಿ ಹುದ್ದೆಯನ್ನು ನೋಡಿ ನನಗೆ ಹೊಟ್ಟೆ ಕಿಚ್ಚಾಗುತ್ತದೆ!
ಎಸ್. ಕೃಷ್ಣಸ್ವಾಮಿ, ನಿವೃತ್ತ ಏರ್‌ಚೀಫ್ ಮಾರ್ಷಲ್