Advertisement

ಆ ಮೂವತ್ತು ನಿಮಿಷ… : ಸ್ಥಳೀಯರ ಕಣ್ಣೆದುರೇ ಸುಟ್ಟು ಕರಕಲಾದ ಸೇನಾನಿಗಳು

11:25 AM Dec 09, 2021 | Team Udayavani |

ಸಮಯ: ಮಧ್ಯಾಹ್ನ 12ರ ಆಸುಪಾಸು
ಸ್ಥಳ: ಕಟ್ಟೇರಿ ಅರಣ್ಯ ಪ್ರದೇಶ

Advertisement

ಊಟಿಗೆ ಸನಿಹವಿರುವ ಕಟ್ಟೇರಿ ಎಂಬ ಪುಟ್ಟ ಕಾಡಿನೂರು ಎಂದಿನಂತೆ ಮೌನ ತಬ್ಬಿಕೊಂಡು ತಣ್ಣಗಿತ್ತು. ಚಹಾ ತೋಟಗಳ ಆಚೆಈಚೆ ಬೀಳುವ ಪುಟಾಣಿ ಎಲೆಯ ಸದ್ದೂ ಈ ಕಾಡಿನ ಪಕ್ಷಿಗಳ ಕಿವಿಗೆ ಭಾರ. ಅಂಥದ್ದರಲ್ಲಿ ಆಗಸದ ದಿಕ್ಕಿನಿಂದ ಕಿವಿಗಡಚಿಕ್ಕುವ ಸದ್ದೊಂದು ಮೌನ ಛೇದಿಸಿ, ಇಡೀ ಕಾಡನ್ನು ಒಂದು ಯಮಕಂಪನಕ್ಕೆ ತಳ್ಳಿತು. ಕಾನನದ ನೆತ್ತಿ ಮೇಲೆ ಸೇನೆಯ “ಎಂಐ17-5′ ಹೆಲಿಕಾಪ್ಟರ್‌ ಹಾರುತ್ತಿದೆ ಎಂಬ ಸಂಗತಿ ಅಲ್ಲಿದ್ದ ಚಹಾ ತೋಟಗಳ ಬುಡಕಟ್ಟು ಸಮುದಾಯದ ಯಾವ ಕಾರ್ಮಿಕನಿಗೂ ಆ ಹೊತ್ತಿಗೆ ಸ್ಪಷ್ಟವಾಗಲೇ ಇಲ್ಲ.

ಆಕಾಶದಿಂದ ಏನೋ ಗಿರಕಿ ಹೊಡೆದು, ದೊಪ್ಪನೆ ಬಿತ್ತು ಅನ್ನೋ ದನ್ನು ಕೆಲವರು ಊಹಿಸಿದರೆ, ಯಾವುದೋ ಹೆಮ್ಮರದ ಕೊಂಬೆ ಕಳಚಿ ಕೆಳಕ್ಕೆ ಬಿದ್ದಿರಬಹುದು ಅಂತ ಮತ್ತೆ ಕೆಲವರು ಕಲ್ಪಿಸಿ ಸುಮ್ಮನಾದರು. ಉತ್ಸಾಹಿ ಹುಡುಗರು ಸನಿಹದ ಬಂಡೆಯನ್ನೇರಿ, ಕಣ್ಣಗಲಿಸಿ, ಬಲುದೂರದ ತನಕ ದೃಷ್ಟಿಹರಿಸಿದರು. ಮೋಡ ಕಟ್ಟಿದ ನಭದ ಕತ್ತಲಲ್ಲಿ, ಕವಿದ ದಟ್ಟದ ಹಿಮದ ನಡುವೆ ಕಂಡಿದ್ದು ಬರೀ ಶೂನ್ಯ.

ಇವೆಲ್ಲ ಘಟಿಸಿ ನಿಮಿಷಗಳು ಕಳೆದಿರಲಿಲ್ಲ… ದೊಡ್ಡ ಸದ್ದು ಅಪ್ಪಳಿಸಿದ ದಿಕ್ಕಿನಿಂದ ಅದೇ ಊರಿನವರ ಕೂಗೂ ಬೆನ್ನೇರಿ ಬಂತು. ಹೆಲಿಕಾಪ್ಟರ್‌ ಮರಕ್ಕೆ ಡಿಕ್ಕಿ ಹೊಡೆದು ಧಗಧಗನೆ ಉರಿಯುತ್ತಿದ್ದುದ್ದನ್ನು ಕಂಡು, ಸನಿಹದ ಕೆಲವು ಪ್ರತ್ಯಕ್ಷದರ್ಶಿಗಳು ಬೊಬ್ಬೆ ಹೊಡೆಯತೊಡಗಿದರು. ಬೆಂಕಿ ನಂದಿಸುವ ಸಣ್ಣಪುಟ್ಟ ಸಾಹಸಕ್ಕೂ ಕೈಹಾಕಿ ಸೋತರು. ಕಾಡಿನ ಮರ ಗಳೆತ್ತರವನ್ನೂ ಮೀರಿಸುವಂತೆ ಜ್ವಾಲಾಗ್ನಿಯ ಹೊಗೆ ಮೇಲೆ ದ್ದಿತ್ತು. ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್‌ ಗರ್ಭದಿಂದ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಮೂರ್ನಾಲ್ಕು ಬೆಂಕಿಚೆಂಡು, ನಾಲ್ಕು ದಿಕ್ಕಿಗೆ ಹಾರಿದವು. ಈ ಅಗ್ನಿ ಅವಾಂತರಗಳ ನಡುವೆ ವಿಚಿತ್ರ ಆಕ್ರಂದನ. ಅರೆಜೀವದಲ್ಲಿದ್ದ ಮೂವರು ಪ್ರಯಾಣಿಕರು ಹೊರಗೆ ಬಂದು ಸಹಾಯಕ್ಕಾಗಿ ಅಂಗಲಾಚಿದರು. ಧಗಧಗನೆ ಹೊತ್ತಿ ಉರಿಯುತ್ತಿದ್ದ ಆ ದೇಹಗಳು ನಾಲ್ಕಾರು ಹೆಜ್ಜೆ ನಡೆಯುವ ಹೊತ್ತಿಗೆ ಧಸಕ್ಕನೆ ಕುಸಿದು ಬಿದ್ದ ಕ್ಷಣ ನಿಜಕ್ಕೂ ಕರುಳು ಹಿಂಡುವಂಥದ್ದು. ಹಾಗೆ ಸುಟ್ಟು ಕರಕಲಾದ ಜೀವಗಳು ನಮ್ಮ ದೇಶದ ವೀರಯೋಧರೆಂಬ ಸಂಗತಿ ಆ ಕ್ಷಣಕ್ಕೂ ಅಲ್ಲಿನವರಿಗೆ ತಿಳಿಯದಾಯಿತು.

ಸುದ್ದಿ ತಿಳಿಸಿದ್ದು ಬುಡಕಟ್ಟು ಯುವಕ!: ಈ ಘಟನೆ ದಿಗ್ಭ್ರಮೆ ಹುಟ್ಟಿಸುತ್ತಿ ದ್ದಂತೆ ದಿಕ್ಕುತೋಚದ ಕಟ್ಟೇರಿ ಊರಿನ ಬುಡಕಟ್ಟು ಸಮುದಾಯದ ಕುಮಾರ್‌ ಎಂಬ ಯುವಕ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಸುದ್ದಿಮುಟ್ಟಿಸಿದ. 12.35ರ ಹೊತ್ತಿಗೆ ಘಟನೆ ನಡೆದ ಸ್ಥಳದತ್ತ ನೀಲಗಿರಿ ಜಿಲ್ಲಾ ಪೊಲೀಸರು ಮತ್ತು ಅಧಿಕಾರಿಗಳು ಧಾವಿಸಿದರು. ರಕ್ಷಣಾ ಕಾರ್ಯಕ್ಕೆ ಯೋಜನೆಗಳನ್ನು ಹೆಣೆಯಲಾಯಿತು.

Advertisement

ಇದನ್ನೂ ಓದಿ : ಹೂಡಿಕೆದಾರರ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಏರಿಳಿಕೆ

ಬೆಂಕಿ ನೋಡಿಯೇ ಬೆಚ್ಚಿದೆವು!: ಹೆಲಿಕಾಪ್ಟರ್‌ ದುರಂತಕ್ಕೀಡಾಗಿದ್ದು ಬುಡಕಟ್ಟು ಆವಾಸತಾಣದ ಕಾಲುಬುಡದಲ್ಲೇ. ಕೇವಲ ಮೂವತ್ತು ನಿಮಿಷದಲ್ಲಿ ಅಲ್ಲಿ ಮಾರಣಹೋಮ ಮುಗಿದುಹೋಗಿತ್ತು. ಇದನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿ ಪಿ. ಕೃಷ್ಣಸ್ವಾಮಿ ವಿವರಿಸುವುದು ಹೀಗೆ:
“ಘಟನೆಯ ವೇಳೆ ನಾನು ಮನೆಯಲ್ಲಿದ್ದೆ. ನನ್ನ ಮನೆಯಿಂದ 100 ಮೀಟರ್‌ ದೂರದಲ್ಲಿಯೇ ದುರಂತ ನಡೆದಿದೆ. ಮೊದಲಿಗೆ ಜೋರಾದ ಶಬ್ದ ಕೇಳಿಬಂತು. ಮನೆಯಿಂದ ಹೊರಗೆ ಬಂದು ನೋಡಿದೆ. ಹೆಲಿಕಾಪ್ಟರ್‌ ಕೆಳಗೆ ಬರುತ್ತಾ ಬರುತ್ತಾ, ಮರವೊಂದಕ್ಕೆ ಡಿಕ್ಕಿ ಹೊಡೆಯಿತು. ಬೆಂಕಿ ಹೊತ್ತಿ ಉರಿಯುತ್ತಿದ್ದ ಹೆಲಿಕಾಪ್ಟರ್‌ನಿಂದ ಒಂದಿಷ್ಟು ಮಂದಿ ಹೊರಗೆ ಬಂದು, ಸಹಾಯಕ್ಕಾಗಿ ಚೀರಾಡುತ್ತಿದ್ದರು. ಆದರೆ ಬೆಂಕಿ ದೊಡ್ಡ ಪ್ರಮಾಣದಲ್ಲಿ ದಹಿಸುತ್ತಿತ್ತು. ದಟ್ಟ ಹೊಗೆ ತುಂಬಿಕೊಂಡಿತ್ತು. ನಾವು ಹತ್ತಿರಕ್ಕೂ ಹೋಗಲಾಗಲಿಲ್ಲ. ಅಷ್ಟೊತ್ತಿಗಾಗಲೇ ನಮ್ಮ ಊರಿನ ಕುಮಾರ್‌ ಹೆಸರಿನ ಯುವಕ ಈ ವಿಚಾರವನ್ನು ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ದಳಕ್ಕೆ ಮುಟ್ಟಿಸಿದ. ಅದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದ ಎರಡು- ಮೂರು ಮಂದಿ ಕೆಳಗೆ ಬಿದ್ದಿದ್ದನ್ನು ನಾನು ನೋಡಿದೆ’ ಎಂದಿದ್ದಾರೆ.

ಗುರುತೂ ಸಿಗದ ರಾವತ್‌!
ದುರ್ಘ‌ಟನೆ ನಡೆದ ಸ್ಥಳದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಕೂಡ ಸುಟ್ಟು ಕರಕಲಾಗಿ ಹೋಗಿದ್ದರು. ಅವರ ಸಿಡಿಎಸ್‌ ಹುದ್ದೆಯ ಬ್ಯಾಡ್ಜ್ಗಳು, ಪದವಿ ಗುರುತುಗಳೆಲ್ಲ ಕ್ಷಣಮಾತ್ರದಲ್ಲಿ ಉರಿದುಹೋಗಿದ್ದವು. ಸಿಡಿಎಸ್‌ ಸೇರಿದಂತೆ ಪತನಗೊಂಡ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿಯನ್ನು ಹೊರಗೆ ತರುವ ಸಾಹಸ ಅಷ್ಟು ಸುಲಭದ್ದಾಗಿರಲಿಲ್ಲ. ಆಘಾತಕಾರಿ
ಸಂಗತಿಯೆಂದರೆ, ದುರಂತದ ಸ್ಥಳಕ್ಕೆ ತಕ್ಷಣ ಧಾವಿಸಲು ಸರಿಯಾದ ದಾರಿಗಳೇ ಇರಲಿಲ್ಲ. ಎಷ್ಟೋ ನಿಮಿಷಗಳ ಬಳಿಕ ಸ್ಥಳೀಯರು, ಬುಡಕಟ್ಟು ಸಮುದಾಯದ ದೇಗುಲ ಸಮೀಪ ಒಂದು
ದಾರಿಮಾಡಿಕೊಟ್ಟರು. ನಜ್ಜುಗುಜ್ಜಾದ ಲೋಹದ ವಸ್ತುಗಳು, ಸುಟ್ಟುಕರಕಲಾದ ಕೊಂಬೆಗಳನ್ನೂ ಸ್ಥಳೀಯರೇ ಬದಿಗೆ ಸರಿಸಿದರು. ಅಷ್ಟರ ಲ್ಲಾಗಲೇ ಪೈಲಟ್‌ ವಿಂಗ್‌ ಕಮಾಂಡರ್‌ ಪೃಥ್ವಿ ಸಿಂಗ್‌ ಚೌಹಾಣ್‌ ಜೀವ ತ್ಯಜಿಸಿಯಾಗಿತ್ತು. ಶೇ.80ರಷ್ಟು ದೇಹ ಕರಕಲಾಗಿ ಅರೆಜೀವದಲ್ಲಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ರನ್ನು ಮೊದಲು ಅಗ್ನಿಶಾಮಕ ತಂಡ ರಕ್ಷಿಸಿತು. ಬಳಿಕ ಉಳಿದ
13 ಮಂದಿಯನ್ನೂ ಹೊರಗೆ ತಂದು, ಆ್ಯಂಬುಲೆನ್ಸ್‌ಗಳ ಮೂಲಕ 6-7 ಕಿ.ಮೀ. ದೂರದ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳನ್ನು ರಕ್ಷಿಸಲು ವೈದ್ಯರು ಎಷ್ಟೇ ಯತ್ನಿಸಿದರೂ, ವಿಧಿಯ ಇಚ್ಚೆ ಬೇರೆಯದ್ದೇ ಆಗಿತ್ತು.

ಇದನ್ನೂ ಓದಿ

Advertisement

Udayavani is now on Telegram. Click here to join our channel and stay updated with the latest news.

Next