ಲತೀಫರಿಂದಾಗಿ ಭಾರತೀಯ ವಾಯುಸೇನೆ ಹಲವಾರು ಕ್ಷೇತ್ರಗಳಲ್ಲಿ ತುಂಬಾ ಬದಲಾವಣೆ ಕಂಡಿತು. ಆಡಳಿತದಲ್ಲಿ, ಕಾರ್ಯಶೈಲಿಯಲ್ಲಿ ಮತ್ತು ಸೈನಿಕರ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಂಡಿದ್ದಕ್ಕೆ ನಾನೇ ಸಾಕ್ಷಿ. ಇಂತಹ ಅಪರೂಪದ ಚೈತನ್ಯ ಏಪ್ರಿಲ್ 30 ರಂದು ತಮ್ಮ 94ನೇ ಪ್ರಾಯದಲ್ಲಿ ಪ್ರಕೃತಿಯೊಂದಿಗೆ ಲೀನವಾಗಿ ಹೋಗಿದೆ..
1980ರಲ್ಲಿ ನಾನಿನ್ನೂ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಶಿಕ್ಷಾರ್ಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಆ ಸಮಯದಲ್ಲಿ ಅಂದಿನ ವಾಯು ಸೇನೆಯ ಪ್ರಧಾನ ದಂಡನಾಯಕರಾಗಿದ್ದ ಏರ್ ಚೀಫ್ ಮಾರ್ಷಲ್ ಐ. ಎಚ್. ಲತೀಫ್ರವರು ವಾರ್ಷಿಕ ಪರಿವೀಕ್ಷಣೆಗಾಗಿ ನಮ್ಮ ಬೆಂಗಳೂರಿನಲ್ಲಿರುವ ತರಬೇತಿ ಕಮಾಂಡ್‌ಗೆ ಭೇಟಿ ನೀಡಿದ್ದರು. ಅದರ ಭಾಗವಾಗಿ ಅವರೊಡನೆ ಸಂದರ್ಶನಕ್ಕೆ ಆಯ್ಕೆಯಾದ ಕೆಲವು ಶಿಕ್ಷಾರ್ಥಿಗಳ ಪೈಕಿ ನಾನೂ ಒಬ್ಬನಾಗಿದ್ದೆ. ಅತ್ಯುನ್ನತ ಪದವಿಗೇರಿದ್ದರೂ ಅವರು ತೋರಿದ ಸೌಜನ್ಯ ಮತ್ತು ನೀಡಿದ ಉತ್ತೇಜನ ಅಪ್ರತಿಮ.
ಏರ್ ಚೀಫ್ ಮಾರ್ಷಲ್ ಐ. ಎಚ್. ಲತೀಫ್ ಅವರು ಹೈದರಾಬಾದ್‌ನಲ್ಲಿ ಜೂನ್ 9, 1923ರಂದು ಜನಿಸಿದರು. ನಿಜಾ‚ಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ 1941ರಲ್ಲಿ ಅಂದಿನ ರಾಯಲ್ ಇಂಡಿಯನ್ ಏರ್‌ಫೋರ್ಸ್‌ಗೆ ಸೇರ್ಪಡೆಗೊಂಡು ಒಂದು ವರ್ಷದ ತರಬೇತಿಯ ನಂತರ 1945ರ ಜನವರಿ 26 ರಂದು ಪೂರ್ಣ ಪ್ರಮಾಣದ ಪೈಲಟ್ ಆಗಿ ಕಾರ್ಯ ಪ್ರಾರಂಭಿ ಸಿದರು. ಹಂತ ಹಂತವಾಗಿ ಮೇಲೇರುತ್ತಾ ಸೆಪ್ಟೆಂಬರ್ 01, 1978ರಂದು ಭಾರತೀಯ ವಾಯುಸೇನೆಯ ದಂಡನಾಯಕ ರಾಗಿ ನಿಯುಕ್ತಿ ಗೊಂಡು 31 ಆಗಸ್ಟ್ 1981ರಂದು ನಿವೃತ್ತಿ ಹೊಂದಿದರು. ವಾಯು ಸೇನೆಯ ಕಾರ್ಯಾವಧಿಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪ್ರತಿಷ್ಟಿತ ಉನ್ನತ ತರಬೇತಿ ಸಂಸ್ಥೆಗಳಾದ ತಮಿಳುನಾಡಿನಲ್ಲಿ ಊಟಿ ಸಮೀಪ ವೆಲ್ಲಿಂಗ್‌ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಮಹಾವಿದ್ಯಾಲಯ(ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್) ಮತ್ತು ನವದೆಹಲಿಯಲ್ಲಿರುವ ರಾಷ್ಟ್ರೀಯ ರಕ್ಷಣಾ ಮಹಾ ವಿದ್ಯಾಲಯ(ನ್ಯಾಷನಲ್ ಡಿಫೆನ್ಸ್ ಕಾಲೇಜ್) (ಈ ಕಾಲೇಜಿನಲ್ಲಿ ನಮ್ಮ ದೇಶದ ಮಿಲಿಟರಿ ಮತ್ತು ನಾಗರಿಕ ಸೇವಾ ಅಧಿಕಾರಿ ಗಳಲ್ಲದೇ, ಅಮೆರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಕೆನಡಾ, ಆಸ್ಟ್ರೇಲಿಯಾ, ವಿಯೆಟ್ನಾಂ, ಶ್ರೀಲಂಕಾ, ನೇಪಾಳ ಮತ್ತು ಅರಬ್ ರಾಷ್ಟ್ರಗಳ ಅನೇಕ ಅಧಿಕಾರಿಗಳು ರಕ್ಷಣಾ ಕ್ಷೇತ್ರದ ವಿವಿಧ ಮಜಲುಗಳಲ್ಲಿ ತರಬೇತಿ ಪಡೆಯುವುದು ಭಾರತೀಯರ ಹೆಮ್ಮೆ)ಗಳಿಂದ ಪದವಿ ಪಡೆದಿದ್ದಾರೆ. ನಿವೃತ್ತಿಯ ನಂತರ ಅವರ ಸೇವಾ ಉತ್ಕೃಷ್ಟತೆಯನ್ನು ಪರಿಗಣಿಸಿ ಮಾರ್ಚ್ 1982ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಅಂದಿನ ಸರ್ಕಾರ ನೇಮಿಸಿತು, ಆ ಹುದ್ದೆಯಲ್ಲಿ ಏಪ್ರಿಲ್ 1985ರವರೆಗೆ ಮುಂದು ವರೆದು ಆನಂತರ 1988ರವರೆಗೆ ಫ್ರಾನ್ಸ್‌ನಲ್ಲಿ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿ ಆಗಸ್ಟ್ 1988ರಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದಿದರು. ತಮ್ಮ ಸೇವಾವಧಿಯಲ್ಲಿ ಸ್ವಾತಂತ್ರ್ಯ ನಂತರದ 1947, 1965 ಮತ್ತು 1971ರ ಪಾಕಿಸ್ತಾನದ ಜೊತೆ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಮಾತ್ರವಲ್ಲದೇ ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಆಡಳಿತದಲ್ಲಿ ಅವರ ಪರವಾಗಿ ಎರಡನೇ ವಿಶ್ವಯುದ್ಧದ ಭಾಗವಾಗಿದ್ದ ಬರ್ಮಾ ಕ್ಯಾಂಪೈನ್‌ನಲ್ಲಿಯೂ ಯಶಸ್ವಿಯಾಗಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದರು. 1971ರ ಯುದ್ಧದ ವೇಳೆ ಲತೀಫರು ಭಾರತೀಯ ವಾಯು ಸೇನೆಯ ಸಹಾಯಕ ದಂಡನಾಯಕರಾಗಿ ರೂಪಿಸಿದ ಯುದ್ಧ ತಂತ್ರ ಅತ್ಯಂತ ಶ್ಲಾಘನೀಯವಾಗಿತ್ತು. ಅವರನ್ನು ಪರಮ ವಿಶಿಷ್ಟ ಸೇವಾ ಪದಕದಿಂದ ಅಲಂಕರಿಸಲಾಗಿದೆ. ಅವರು ಪ್ರಾರಂಭಿಕವಾಗಿ ಅಂದಿನ ಯುದ್ಧ ವಿಮಾನಗಳಾಗಿದ್ದ ವ್ಯಾಪಿತಿ ಮತ್ತು ಅಡೈಕ್ಸ್ ಹಾಕರ್ ಹಾರ್ಟ್‌ಗಳಿಂದ ಹಿಡಿದು ನಂತರದ ಆಧುನಿಕ ವಿಮಾನಗಳಾಗಿದ್ದ ಹರಿಕೇನ್ ಮತ್ತು ಸ್ಪಿಟ್ ಫೈರ್‌ಗಳಲ್ಲಿ ಉನ್ನತ ವಾದ ಹಾರಾಟದ ಪರಿಣತಿ ಹೊಂದಿದ್ದರು. ಭಾರತದ ಗಗನದಲ್ಲಿ ಇಂದು ಸ್ವತ್ಛಂದವಾಗಿ ಹಾರಾಡುತ್ತಾ ಶತ್ರುಗಳಲ್ಲಿ ನಡುಕ ಹುಟ್ಟಿಸಿರುವ ಆಧುನಿಕ ಯುದ್ಧ ವಿಮಾನಗಳಾದ ಬ್ರಿಟಿಷ್ – ಫ್ರಾನ್ಸ್ ನಿರ್ಮಿತ ಜಾಗ್ವಾರ್, ರಷ್ಯಾದ ಮಿಕೋಯೆನ್ ಗುರೇವಿಚ್ ನಿರ್ಮಿತ ಮಿಗ್ – 23 ಮತ್ತು ಮಿಗ್ 25ಗಳನ್ನು (ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಖರೀದಿ ವಿಷಯದಲ್ಲಿ ಸರ್ಕಾರದ ಮನವೊಲಿಸಿ) ಭಾರತೀಯ ವಾಯುಪಡೆಗೆ ಸೇರ್ಪಡೆ ಗೊಳಿಸಿದ ಶ್ರೇಯಸ್ಸು ಏರ್ ಚೀಫ್ ಮಾರ್ಷಲ್ ಐ. ಎಚ್. ಲತೀಫ್ರವರಿಗೆ ಸಲ್ಲುತ್ತದೆ. ಬ್ರಿಟಿಷರ ಆಳ್ವಿಕೆ ಕೊನೆಗೊಂಡು 1947ರಲ್ಲಿ ಭಾರತ ಇಬ್ಭಾಗ ವಾದಾಗ ಅವರ ಹಿಂದಿನ ರಾಯಲ್ ಏರ್ ಫೋರ್ಸ್‌ನಲ್ಲಿ ಸಹೋದ್ಯೋಗಿಗಳಾಗಿದ್ದ ಸ್ಕಾಢನ್ ಲೀಡರ್ ಅಸ್ಕರ್ ಖಾನ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ನೂರ್ ಖಾನ್‌ರಿಂದ ಪಾಕಿಸ್ತಾನವನ್ನು ಸೇರುವಂತೆ ಪುಸಲಾಯಿಸುವ ಎಷ್ಟೇ ಒತ್ತಡ ಬಂದರೂ ಮಣಿಯದೇ ಹುಟ್ಟಿದ ಮಣ್ಣಿನ ಬಗ್ಗೆ ಅತ್ಯಂತ ನಿಷ್ಟೆ ತೋರಿ ಭಾರತೀಯ ವಾಯುಸೇನೆಯಲ್ಲಿಯೇ ನೆಲೆ ನಿಂತ ಧೀಮಂತ ಯೋಧ ಈ ಏರ್ ಚೀಫ್ ಮಾರ್ಷಲ್ ಐ. ಎಚ್. ಲತೀಫ್. ಭಾರತೀಯ ಮುಸ್ಲಿಂ ಸಮುದಾಯಕ್ಕೆ ಸೇರಿದ ಅವರ ಈ ದೇಶ ನಿಷ್ಟೆ ಅವರನ್ನು 1978ರಲ್ಲಿ ವಾಯು ಸೇನೆಯ ದಂಡನಾಯಕ ರಾಗಿ ನಿಯುಕ್ತಿಗೊಳಿಸುವ ಮೂಲಕ ಪುರಸ್ಕೃತಗೊಂಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಏಕೆಂದರೆ, ಅಲ್ಲಿಯವರೆಗೆ ಭಾರತದಲ್ಲಿ ಯಾವುದೇ ರಕ್ಷಣಾ ಪಡೆಯ (ಭೂಸೇನೆ, ವಾಯು ಸೇನೆ ಮತ್ತು ನೌಕಾಸೇನೆ) ನೇತೃತ್ವ ಆ ಸಮುದಾಯದವರಿಗೆ ದೊರೆತಿರಲಿಲ್ಲ. ಹಾಗಾಗಿ ಅವರು ಈ ಪದವಿಗೇರಿದ ಮೊದಲ ಹಾಗೂ ಏಕೈಕ ಕಮಾಂಡರ್.
ಇವರ ನೇತೃತ್ವದ ಸಮಯದಲ್ಲಿ ಭಾರತೀಯ ವಾಯುಸೇನೆ ಆಡಳಿತದಲ್ಲಿ, ಕಾರ್ಯಶೈಲಿಯಲ್ಲಿ ಮತ್ತು ಸೈನಿಕರ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಗಳನ್ನು ಕಂಡಿದ್ದಕ್ಕೆ ನಾನೇ ಸಾಕ್ಷಿ. 1981ರಲ್ಲಿ ಆವರೆಗೆ ಯಾರೂ ಯೋಚಿಸಿರದ ವಾಯು ಸೈನಿಕರ ಸಮವಸ್ತ್ರದ ಬದಲಾವಣೆ ಒಂದು ಕ್ರಾಂತಿಕಾರಕ ಹೆಜ್ಜೆ ಯೆನಿಸಿತು. ಅಲ್ಲಿಯವರೆಗೆ ಪೊಲೀಸರಂತೆ ವಾಯುಸೇನೆಯ ಲ್ಲಿಯೂ ಖಾಕಿ ಬಣ್ಣದ ಸಮವಸ್ತ್ರ ಧರಿಸುತ್ತಿದ್ದೆವು. ಲತೀಫರ ನವೀಕರಣದ ಯೋಚನೆಯ ಫಲವಾಗಿ ಈಗ ಕಾಣುವ ನೀಲಿ ಮಿಶ್ರಿತ ಬೂದು ಬಣ್ಣದ ಪ್ಯಾಂಟ್ ಹಾಗೂ ತಿಳಿ ನೀಲಿ ಬಣ್ಣದ ಶರ್ಟ್ ಹಾಗೂ ಅದಕ್ಕೆ ಹೊಂದುವ ಇತರೆ ಸಲಕರಣೆಗಳು ಚಾಲ್ತಿಯಾಗಿವೆ. ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಧರಿಸುತ್ತಿದ್ದ ಕಂಬಳಿಯಂತಹ ಸಮವಸ್ತ್ರದ ಬದಲು ಈಗ ಟೆರಿಊಲ್ ಬಟ್ಟೆಯಿಂದ ತಯಾರಿಸಿದ ವಸ್ತ್ರಗಳು ಧರಿಸಲೂ ಸಹಾ ಅತ್ಯಂತ ಅನುಕೂಲಕರವಾಗಿದ್ದು ಚಳಿಯಿಂದ ಒಳ್ಳೆಯ ರಕ್ಷಣೆ ಒದಗಿಸುತ್ತವೆ. ಇವನ್ನು ಧರಿಸುವಾಗ ನನಗಂತೂ ಹಲವು ಬಾರಿ ಲತೀಫ್ ಸಾಹೇಬರ ನೆನಪಾಗಿದ್ದು ಸತ್ಯ. ಇದು ಕೇವಲ ಸಮವಸ್ತ್ರದ ವಿಷಯ ಮಾತ್ರ ಆಗಿರದೇ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ಭಾರತೀಯ ವಾಯುಸೇನೆ ಲತೀಫ ರಿಂದಾಗಿ ತುಂಬಾ ಸುಧಾರಣೆ ಕಂಡಿತು. ಇಂತಹ ಅಪರೂಪದ ಒಂದು ಚೈತನ್ಯ ಇದೇ ಏಪ್ರಿಲ್ 30ರಂದು 94 ವರ್ಷ ಪ್ರಾಯದಲ್ಲಿ ಪ್ರಕೃತಿಯೊಂದಿಗೆ ಲೀನವಾಗಿ ಹೋಗಿದೆ. ನಮ್ಮ ಹೆಮ್ಮೆಯ ನಭದ ನಾಯಕ ಐ.ಎಚ್.ಲತೀಫ್ ಅವರಿಗೆ ನಮಿಸುತ್ತಾ… ಜೈ ಹಿಂದ್!
ಡಿ. ಆರ್. ಪ್ರಹ್ಲಾದ, ನಿವೃತ್ತ ವಾಯು ಸೈನಿಕ