Advertisement

1ಕೋಟಿ ಲಕ್ಷ ಸಸಿ ನೆಡುವ ಗುರಿ

09:22 PM Apr 26, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ತೀವ್ರತರವಾದ ಬರಸ್ಥಿತಿಯನ್ನು ನಿವಾರಿಸಲು ಜಿಲ್ಲಾದ್ಯಂತ ಹಸಿರೀಕರಣ ಹೆಚ್ಚು ಮಾಡಲು ಮೇ 1ಕ್ಕೆ ಸಸಿ ನೆಟ್ಟು ಬರ ಅಟ್ಟು ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಈ ವರ್ಷದ ಮುಂಗಾರಿನಲ್ಲಿ ಒಟ್ಟು 1 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ರೋಟರಿ ಕೋಟಿ-ನಾಟಿ ಯೋಜನೆಯ ಅಧ್ಯಕ್ಷ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಕೆ.ಅಮರನಾರಾಯಣ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಮಿನಿ ಸಭಾಂಗಣದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ-ನಾಟಿ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಅರಿವು ಮೂಡಿಸುವ ಕರಪತ್ರ ಹಾಗೂ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಂತರ್ಜಲ ಕುಸಿತ: ಜಿಲ್ಲಾದ್ಯಂತ ಸತತ ಬರಗಾಲದ ಪರಿಣಾಮ ಪರಿಸರ ಅಸಮತೋಲನದಿಂದ ಕೂಡಿದ್ದು, ಅರಣ್ಯ ಪ್ರದೇಶ ಶೇ.9 ರಷ್ಟು ಮಾತ್ರ ಇದೆ. ಪ್ರತಿಕೂಲ ಹವಾಮಾನದಿಂದಾಗಿ ಬರದ ಛಾಯೆ ಪ್ರತಿ ವರ್ಷವೂ ಆವರಿಸುತ್ತಿದೆ. ಹವಾಮಾನ ವೈಪರೀತ್ಯಗಳಿಂದಾಗಿ ಮಳೆ ಪ್ರಮಾಣ ದಿನೇ ದಿನೆ ಜಿಲ್ಲೆಯಲ್ಲಿ ಕಡಿಮೆಯಾಗುತ್ತದೆ. ಅಂತರ್ಜಲದಲ್ಲಿ ತೀವ್ರ ಕುಸಿತವುಂಟಾಗಿದೆ ಎಂದರು.

ಭಾಗವಹಿಸುವಿಕೆ ಮುಖ್ಯ: ಕೃಷಿ ಹಾಗೂ ಕುಡಿಯಲು ನೀರಾವರಿ ಸಮಸ್ಯೆ ತಾರಕಕ್ಕೇರಿದೆ. ಇದಕ್ಕೆಲ್ಲ ಪರಿಹಾರ ಸಿಗಬೇಕಾದರೆ ವ್ಯಾಪಕವಾಗಿ ಹಸಿರೀಕರಣ ಮಾಡುವುದೊಂದೇ ದಾರಿ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ರೋಟಿ ಕೋಟಿ-ನಾಟಿ ಕಾರ್ಯಕ್ರಮದ ಮೂಲಕ ಶೇ.33 ರಷ್ಟು ಹಸಿರು ಕವಚ ನಿರ್ಮಾಣ ಮಾಡಲು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ರೈತರ ಮುಖಾಂತರ ಕನಿಷ್ಠ ಒಂದು ಕೋಟಿ ಸಸಿಗಳನ್ನು ನೆಡಿಸಲು ರೋಟರಿ ಬೆಂಗಳೂರು ಆರ್ಚಡ್ಸ್‌ ಮತ್ತು ಜಿಲ್ಲೆಯ ಜಿಪಂ, ತಾಪಂ ಹಾಗೂ ಗ್ರಾಪಂಗಳು ಸಕ್ರಿಯವಾಗಿ ಭಾಗವಹಿಸುವಿಕೆ ಅಗತ್ಯವೆಂದರು.

2019ರ ಮಳೆಗಾಲದಲ್ಲಿ ಜಿಲ್ಲೆಯಾದ್ಯಂತ 25 ಲಕ್ಷ ಸಸಿಗಳನ್ನು ಆರೂ ತಾಲೂಕುಗಳಲ್ಲಿ ನೆಡಿಸಲು ಕಾರ್ಯ ತಂತ್ರದ ಬಗ್ಗೆ ಕಿರುಹೊತ್ತಿಗೆಯನ್ನು ತರಲಾಗಿದೆ. ತೀವ್ರ ಸಂಕಷ್ಟದಲ್ಲಿರುವ ರೈತರು ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯು ಬೆಳೆಸಿರುವ ಸಸಿಗಳನ್ನು ನಿಯಮಾನುಸಾರ ಪಡೆದುಕೊಳ್ಳಲು ಅವಶ್ಯವಿರುವ ಮಾಹಿತಿಯ ಪುಸ್ತಕವನ್ನು ರೋಟರಿ ಬೆಂಗಳೂರು ಆರ್ಚಡ್ಸ್‌ ರವರು ಹೊರ ತಂದಿದ್ದಾರೆ.

Advertisement

ಅರಣ್ಯ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಮೂಲಕ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕಿರುಪುಸ್ತಕದಲ್ಲಿ ರೈತರ ಉಪಯೋಗಕ್ಕೆ ಪ್ರಕಟಿಸಲಾಗಿದೆ ಎಂದರು. ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಂಗಪ್ಪ ಉಪಾಸೆ, ಜಿಪಂ ಮುಖ್ಯ ಯೋಜನಾಧಿಕಾರಿ ಮಾಧವರಾಮ್‌ ಸೇರಿದಂತೆ ಜಿಲ್ಲೆಯ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ನರೇಗಾ ಯೋಜನೆ ಸಹಾಯಕ ನಿರ್ದೇಶಕರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಜೂನ್‌ ತಿಂಗಳಲ್ಲಿ ಹಸಿರು ಹಬ್ಬ: ಜಿಪಂ ಸಿಇಒ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲಾದ್ಯಂತ ಹಸಿರು ಹಬ್ಬವನ್ನು ಜೂನ್‌ 1ರಿಂದ ಅಥವಾ ಮಳೆಯ ದಿನಗಳನ್ನು ಆಧರಿಸಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ತಿಳಿಸಲಾಗಿದೆ. ಕಾರ್ಯಕ್ರಮದ ಕಾರ್ಯ ಯೋಜನೆ ಯಶಸ್ವಿಗೆ ಗ್ರಾಪಂಗಳಿಗೆ ನೋಡಲ್‌ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಹಸಿರೀಕರಣಕ್ಕಾಗಿ ರೂಪಿಸಿರುವ ರೋಟರಿ-ಕೋಟಿ-ನಾಟಿ ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬೇಕೆಂದು ಜಿಲ್ಲೆಯ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next